ಮುಳ್ಳೇರಿಯ: ಕಾರಡ್ಕ ಪಂಚಾಯತಿಯ ನಾರ್ಲದಲ್ಲಿ ರಾಜ್ಯ ಸರ್ಕಾರ ಪ್ರಾರಂಭಿಸಲು ಮುಂದಾಗಿರುವ ಬಾಕ್ಸೈಟ್ ಗಣಿಗಾರಿಕೆಯನ್ನು ಸಿಪಿಎಂ ಸ್ಥಳೀಯ ನಾಯಕತ್ವ ವಿರೋಧಿಸಿದೆ. ಸಿಪಿಎಂ ಕಾರಡ್ಕ(ಕಾಡಗಂ) ಸ್ಥಳೀಯ ಸಮಿತಿಯು ಕಲಾಪಗಳನ್ನು ತಕ್ಷಣ ಸ್ಥಗಿತಗೊಳಿಸುವಂತೆ ಒತ್ತಾಯಿಸಿದೆ. ಈ ಬಗ್ಗೆ ಇತ್ತೀಚೆಗೆ ಕಲೆಕ್ಟರೇಟ್ ಗೆ ಗಣಿಗಾರಿಕೆ ವಿರುದ್ಧ ಮೆರವಣಿಗೆ ನಡೆಸಿತ್ತು. ಗಣಿಗಾರಿಕೆ ಕೈಬಿಡುವವರೆಗೆ ಪ್ರತಿಭಟನೆ ಮುಂದುವರಿಯಲಿದೆ ಎಂದು ಸಿಪಿಎಂ ಕಾಡಗಂ ಸ್ಥಳೀಯ ಕಾರ್ಯದರ್ಶಿ ಕೆ. ಜಯನ್ ಸ್ಪಷ್ಟಪಡಿಸಿದ್ದಾರೆ.
ಗಣಿಗಾರಿಕೆಗೆ ಗುರುತಿಸಲಾದ ಹೆಚ್ಚಿನ ಭೂಮಿ ಸಂರಕ್ಷಿತ ಅರಣ್ಯ ಭೂಮಿಯಾಗಿದೆ. ಇದು ವಸತಿ ಪ್ರದೇಶಗಳ ಸಮೀಪದಲ್ಲಿದೆ. ವಸತಿ ಪ್ರದೇಶಗಳು ಮತ್ತು ಇತರ ಒಂದಷ್ಟು ಪ್ರದೇಶಗಳನ್ನು ಹೊರತುಪಡಿಸಿ, 82.15 ಹೆಕ್ಟೇರ್ ಭೂಮಿಯನ್ನು ಗಣಿಗಾರಿಕೆಗೆ ಗುರುತಿಸಲಾಗಿದೆ.
19 ರಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಕಂಪನಿಗಳೊಂದಿಗೆ ಸಭೆ ನಡೆಸಲು ನಿರ್ಧರಿಸಿ ಬಳಿಕ ಅದು ಮುಂದೂಡಲ್ಪಟ್ಟಿತು. 2017 ರಲ್ಲಿ ಯೋಜನೆಯನ್ನು ಕೈಬಿಡಲು ನಿರ್ಧರಿಸಲಾಗಿತ್ತು. ಸರ್ಕಾರ ತನ್ನ ನಿಲುವನ್ನು ಬದಲಾಯಿಸಿದ ನಂತರ ಒಂದು ವರ್ಷದ ಹಿಂದೆ ಗಣಿಗಾರಿಕೆ ಕಾರ್ಯಾಚರಣೆಯನ್ನು ಪುನರ್ ಮುನ್ನೆಲೆಗೆ ತರಲಾಯಿತು. ಸಮೀಕ್ಷೆ ಮತ್ತು ಭೂಮಾಪನ ಪೂರ್ಣಗೊಂಡ ನಂತರ ಟೆಂಡರ್ ಆಹ್ವಾನಿಸಲಾಗಿದೆ. ಜೊತೆಗೆ, 2007 ರಲ್ಲಿ, ಕಿನಾನೂರು ಕರಿಂದಳ ಪಂಚಾಯತ್‍ನಲ್ಲಿ 200 ಎಕರೆ ಭೂಮಿಯನ್ನು ಗಣಿಗಾರಿಕೆಗಾಗಿ ಮುಂಬೈ ಮೂಲದ ಆಶಾಪುರ ಕಂಪನಿಗೆ ಹಸ್ತಾಂತರಿಸಲಾಗಿತ್ತು. ಆದರೆ ವಿರೋಧದಿಂದಾಗಿ ಯೋಜನೆಯನ್ನು ಕೈಬಿಡಬೇಕಾಯಿತು.



