ಕಾಸರಗೋಡು: ಗಡಿನಾಡು ಕಾಸರಗೋಡಿನ ಸಂಸ್ಕøತಿ, ಕನ್ನಡಿಗರ ಆದರಾತಿಥ್ಯ ಸಮಾಜಕ್ಕೆ ಆದರ್ಶಪ್ರಾಯವಾದುದು ಎಂದು ಮೈಸೂರಿನ ನಾ. ನಾಗಚಂದ್ರ ತಿಳಿಸಿದ್ದಾರೆ. ಅವರು ಕಾಸರಗೋಡು ನುಳ್ಳಿಪ್ಪಾಡಿಯ ಡಾ. ವಾಮನ್ ರಾವ್ ಬೇಕಲ್ ಸಾರಥ್ಯದ ಕನ್ನಡ ಭವನ ಗ್ರಂಥಾಲಯ ವತಿಯಿಂದ ಕೊಡಮಾಡಿದ"ಕನ್ನಡ ಪಯಸ್ವಿನಿ ಪ್ರಶಸ್ತಿ "ಸ್ವೀಕರಿಸಿ ಮಾತನಾಡಿದರು.
ಯಕ್ಷಗಾನ ಪಿತಾಮಹ ಪಾರ್ತಿಸುಬ್ಬ, ಪ್ರಥಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ, ನಾಡೋಜ ಡಾ. ಕಯ್ಯಾರ ಕಿಞಣ್ಣ ರೈ ಮುಂತಾದವರು ಬಾಳಿ ಬದುಕಿದ ಗಡಿನಾಡಿನ ಮಣ್ಣು ಪವಿತ್ರವಾದುದು. ಕೇರಳಂ ಸರ್ಕಾರದ ಕನ್ನಡ ವಿರೋಧಿ ಧೋರಣೆ ಖಂಡನೀಯ, ಗಡಿನಾಡಿನ ಕನ್ನಡಿಗರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿರುವುದಾಗಿ ತಿಳಿಸಿದರು.
ಈ ಸಂದರ್ಭ ಕನ್ನಡ ಭವನ ಗ್ರಂಥಾಲಯಕ್ಕೆ ನಾ. ನಾಗಚಂದ್ರ ಅವರು ಸುಮಾರು 406 ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಪತ್ರಕರ್ತ, ಕನ್ನಡ ಭವನದ ಗೌರವಾಧ್ಯಕ್ಷ ಪ್ರದೀಪ್ ಬೇಕಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಭವನ ಸ್ಥಾಪಕ ಡಾ. ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾ ರಾಣಿ ಟೀಚರ್ ನಾ. ನಾಗಚಂದ್ರ-ಅನುಸೂಯ ದಂಪತಿಗೆ "ಕನ್ನಡ ಪಯಸ್ವಿನಿ "ಅಂತಾರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದರು. ಸಂಧ್ಯಾರಾಣಿ ಸ್ವಾಗತಿಸಿದರು.ಕನ್ನಡ ಭವನ ಕಾರ್ಯದರ್ಶಿ ವಸಂತ್ ಕೆರೆಮನೆ ನಿರೂಪಿಸಿದರು. ವಾಮನ್ ರಾವ್ ಬೇಕಲ್ ಪ್ರಸ್ತಾವಿಕ ಮಾತುಗಳನ್ನಾಡಿದರು. ಸಂಘಟನಾ ಕಾರ್ಯದರ್ಶಿ ರಾಜೇಶ್ ಕೋಟೆಕಣಿ ವಂದಿಸಿದರು.



