ಅಥೆನ್ಸ್: ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಮಗನನ್ನು ರಕ್ಷಿಸಿಕೊಳ್ಳಲು ತಂದೆಯೊಬ್ಬರು ಪಡಿಪಾಟಿಲು ಪಟ್ಟಿರುವ ಘಟನೆ ಸಿರಿಯಾದಲ್ಲಿ ನಡೆದಿದೆ.
ಹೌದು, ಕಟ್ಟಡ ಕಾರ್ಮಿಕರಾಗಿದ್ದ ಅಬ್ದುಲ್ ಅಜೀಜ್ ಅಲ್ದಾರ್ವಿಶ್ ಎಂಬುವರು ತನ್ನ 10 ವರ್ಷದ ಮಗ ಯಾಹ್ಯಾನನ್ನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಯಾಹ್ಯಾನ ಒಂದು ತಿಂಗಳ ಡಯಾಲಿಸಿಸ್‌ಗೆ ₹1.30 ಲಕ್ಷ ಅಗತ್ಯವಿತ್ತು. ಅಷ್ಟೊಂದು ಹಣ ಪಾವತಿಸುವ ಶಕ್ತಿಯು ಅಬ್ದುಲ್ ಕುಟುಂಬಕ್ಕಿರಲಿಲ್ಲ. ಯಾಹ್ಯಾಗೆ ಚಿಕಿತ್ಸೆ ಕೊಡಿಸುತ್ತಿದ್ದ ಲೆಬನಾನ್‌ನ ಸಾರ್ವಜನಿಕ ಆಸ್ಪತ್ರೆಯು ಸಂಘರ್ಷ ಮತ್ತು ನಿರ್ಲಕ್ಷ್ಯದಿಂದಾಗಿ ಸಂಪೂರ್ಣ ಕುಸಿಯುವ ಹಂತ ತಲುಪಿತ್ತು.
ಯಾಹ್ಯಾನನ್ನು ಏನಾದರೂ ಮಾಡಿ ಉಳಿಸಿಕೊಳ್ಳಬೇಕೆಂದು ಪಣತೊಟ್ಟಿದ್ದ ಅಬ್ದುಲ್, ತನ್ನ ಉಳಿತಾಯ, ಸಾಲ ಸೇರಿದಂತೆ ವಿವಿಧ ಮೂಲಗಳಿಂದ ₹5.43 ಲಕ್ಷ ಸಂಗ್ರಹಿಸಿದ್ದರು. ಪತ್ನಿ ಮತ್ತು ಎಂಟು ಮಕ್ಕಳನ್ನು ಲೆಬನಾನ್ ಗಡಿ ಸಮೀಪವಿರುವ ಸಣ್ಣ ಹಳ್ಳಿಯಲ್ಲೇ ಬಿಟ್ಟು ಅಬ್ದುಲ್, ಮಗನಿಗೆ ಹೊಸ ಕಿಡ್ನಿ ಮತ್ತು ಹೊಸ ಜೀವನ ನೀಡಬಲ್ಲ ವೈದ್ಯರನ್ನು ಹುಡುಕುತ್ತಾ ಸೈಪ್ರಸ್‌ಗೆ 200 ಕಿ.ಮೀ ಪ್ರಯಾಣಿಸುವ ವಲಸಿಗರ ದೋಣಿ ಹತ್ತಿದ್ದರು.
ಲೆಬನಾನ್ ತೊರೆದ ಎರಡು ವರ್ಷಗಳ ಬಳಿಕ ಕಳೆದ ಜನವರಿಯಲ್ಲಿ ಗ್ರೀಸ್‌ನಲ್ಲಿ ಹೊಸದಾಗಿ ಸ್ಥಾಪಿಸಲಾದ ಒನಾಸಿಸ್ ನ್ಯಾಷನಲ್ ಟ್ರಾನ್ಸ್‌ಪ್ಲಾಂಟ್ ಸೆಂಟರ್‌ನಲ್ಲಿ ಯಾಹ್ಯಾಗೆ ಕಿಡ್ನಿ ಕಸಿ ಮಾಡಲಾಗಿದೆ. ಮಗನಿಗಾಗಿ ತಂದೆಯೇ ಕಿಡ್ನಿ ದಾನ ಮಾಡಿದ್ದಾರೆ. ಈ ಯಶಸ್ಸಿನಿಂದ ಅಂತರರಾಷ್ಟ್ರೀಯ ವೈದ್ಯಕೀಯ ಸಹಕಾರದಿಂದ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ.
'ನಾನು ಈ ಅಪಾಯವನ್ನು ಎದುರಿಸಲೇಬೇಕಿತ್ತು. ಒಂದೋ ಎಲ್ಲವೂ ಸರಿಹೋಗಿ ಮಗನಿಗೆ ಚಿಕಿತ್ಸೆ ಸಿಗಬೇಕು... ಇಲ್ಲವಾದರೆ ನಾವಿಬ್ಬರೂ ಸಾಯಬೇಕು' ಎಂದು ನಿರ್ಧರಿಸಿದ್ದಾಗಿ 32 ವರ್ಷದ ಅಬ್ದುಲ್ ಹೇಳಿದ್ದಾರೆ.
ಅದೊಂದು ಪವಾಡ...
ಅಥೆನ್ಸ್‌ನ ಸ್ಥಳೀಯ ಆಟದ ಮೈದಾನವೊಂದರಲ್ಲಿ ಯಾಹ್ಯಾನನ್ನು ಉಯ್ಯಾಲೆಯಲ್ಲಿ ತೂಗುತ್ತಾ ಅಬ್ದುಲ್ ತಮ್ಮ ಕಷ್ಟದ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ.
'2024ರಲ್ಲಿ ಲೆಬನಾನ್‌ನಲ್ಲಿ ದೋಣಿ ಹತ್ತುವ ಮುನ್ನ ಕೆಲವು ಗಂಟೆಗಳ ಪ್ರಯಾಣಕ್ಕಾಗಿ ಕುಡಿಯಲು ನೀರು ಮತ್ತು ತಿನ್ನಲು ಖರ್ಜೂರಗಳನ್ನು ಮಾತ್ರ ತೆಗೆದುಕೊಂಡಿದ್ದೆವು. ಯಾಹ್ಯಾಗೆ ಒಂದು ಸುತ್ತಿನ ಪೆರಿಟೋನಿಯಲ್ ಡಯಾಲಿಸಿಸ್ ಕೂಡಾ ಮಾಡಿಸಲಾಗಿತ್ತು. ದೋಣಿ ಕೆಲವು ಕಿಲೋ ಮೀಟರ್ ದೂರ ಸಾಗಿತು ಎನ್ನುವಷ್ಟರಲ್ಲಿ ಪ್ರಮಾದವಶಾತ್ ಸತತ ಒಂದು ವಾರದ ಕಾಲ ಅಲೆಗಳ ಅಬ್ಬರದ ನಡುವೆ ಸಮುದ್ರದಲ್ಲಿ ಸಿಕ್ಕಿಹಾಕಿಕೊಂಡಿತ್ತು. ನೀರನ್ನೇ ಕುಡಿದು ಬದುಕಿದ್ದೆವು. ವ್ಯಾಪಾರಿ ಹಡಗೊಂದು ದೇವರಂತೆ ಬಂದು ನಮ್ಮನ್ನು ರಕ್ಷಿಸಿತು' ಎಂದು ಸ್ಮರಿಸಿದ್ದಾರೆ.
'ನನ್ನ ಮಗ ಇಷ್ಟೆಲ್ಲಾ ಕಷ್ಟಗಳನ್ನು ಸಹಿಸಿಕೊಳ್ಳುತ್ತಾನೆ ಎಂದು ನಾನು ಊಹಿಸಿರಲಿಲ್ಲ... ಅದೊಂದು ಪವಾಡವೇ ಸರಿ. ಸಾವು ನನ್ನ ಹಣೆಯಲ್ಲಿ ಬರೆದಿರಲಿಲ್ಲ' ಎಂದಿದ್ದಾರೆ.

