ಕೊಚ್ಚಿ: ತಮ್ಮ ಪದೋನ್ನತಿಗೆ ಧಕ್ಕೆಯುಂಟಾಗಬಹುದು ಅಥವಾ ಅಧಿಕಾರದಲ್ಲಿರುವವರು ಅಸಮಾಧಾನಗೊಳ್ಳಬಹುದು ಎಂಬ ಆತಂಕವಿದ್ದರೂ ಸಹ ನ್ಯಾಯಾಧೀಶರು ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ಹಿಂಜರಿಯಬಾರದು ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶೆ ನ್ಯಾ.ಬಿ.ವಿ.ನಾಗರತ್ನ ಅವರು ಹೇಳಿದ್ದಾರೆ.
ನ್ಯಾಯಾಂಗ ಪರಿಶೀಲನೆಯ ಅರ್ಥಪೂರ್ಣ ಅನುಷ್ಠಾನಕ್ಕೆ ಧೈರ್ಯ ಮತ್ತು ದೃಢ ನಿಲುವು ಅತ್ಯಗತ್ಯ ಎಂದು ಅವರು ಪ್ರತಿಪಾದಿಸಿದ್ದಾರೆ ಎಂದು livelaw.in ವರದಿ ಮಾಡಿದೆ.
ಮಂಗಳವಾರ ಕೇರಳ ಉಚ್ಚ ನ್ಯಾಯಾಲಯದಲ್ಲಿ ದ್ವಿತೀಯ ಟಿ.ಎಸ್.ಕೃಷ್ಣಮೂರ್ತಿ ಅಯ್ಯರ್ ಸ್ಮಾರಕ ಉಪನ್ಯಾಸವನ್ನು ನೀಡಿದ ಅವರು, ನ್ಯಾಯಾಂಗ ಪರಿಶೀಲನೆಯು ಹಲವಾರು ಸಂದರ್ಭಗಳಲ್ಲಿ ನ್ಯಾಯಾಲಯಗಳು ಕಾನೂನನ್ನು ಅಮಾನ್ಯಗೊಳಿಸುವುದನ್ನು, ಕಾರ್ಯಾಂಗದ ಕ್ರಮವನ್ನು ನಿರ್ಬಂಧಿಸುವುದನ್ನು ಮತ್ತು ಕೆಲವೊಮ್ಮೆ ರಾಜಕೀಯ ಬಹುಮತದಿಂದ ಜಾರಿಗೊಳಿಸಿದ ಸಾಂವಿಧಾನಿಕ ತಿದ್ದುಪಡಿಗಳನ್ನು ರದ್ದುಗೊಳಿಸುವುದನ್ನೂ ಅಗತ್ಯವಾಗಿಸುತ್ತದೆ ಎಂದು ಹೇಳಿದರು.
ಇವು ಸುಲಭದ ಕೆಲಸಗಳಲ್ಲ, ಅವು ಹೆಚ್ಚಿನ ಸಂದರ್ಭಗಳಲ್ಲಿ ರಾಜಕೀಯ ಪರಿಣಾಮಗಳನ್ನು ಹೊಂದಿರುತ್ತವೆ ಎಂದು ಹೇಳಿದ ಅವರು, ಒಂದು ಅಪ್ರಿಯ ತೀರ್ಪು ತಮ್ಮ ಪದೋನ್ನತಿಯ ಮೇಲೆ ಪರಿಣಾಮ ಬೀರಬಹುದು ಅಥವಾ ತಮ್ಮನ್ನು ಅಧಿಕಾರದಲ್ಲಿರುವವರ ಅವಕೃಪೆಗೆ ಪಾತ್ರವಾಗಿಸಬಹುದು ಎಂಬ ಅರಿವು ನ್ಯಾಯಾಧೀಶರಿಗೆ ಇರಬಹುದು. ಆದಾಗ್ಯೂ, ಆ ಅರಿವು ಸಂವಿಧಾನವು ಬಯಸುವ ಕರ್ತವ್ಯವನ್ನು ನಿರ್ವಹಿಸುವಲ್ಲಿ ಅಡ್ಡಿಯಾಗಬಾರದು ಎಂದು ಒತ್ತಿ ಹೇಳಿದರು.
ಪ್ರಮಾಣ ವಚನವು ನ್ಯಾಯಾಧೀಶರ 'ನ್ಯಾಯಾಂಗ ಧರ್ಮ' ಎಂದು ಬಣ್ಣಿಸಿದ ನ್ಯಾ.ನಾಗರತ್ನಾ, ವೈಯಕ್ತಿಕ ಅಥವಾ ವೃತ್ತಿಪರ ಪರಿಣಾಮಗಳನ್ನು ಲೆಕ್ಕಿಸದೆ ಅದನ್ನು ಗೌರವಿಸಬೇಕು. ವೃತ್ತಿ ಜೀವನದ ಭವಿಷ್ಯದ ಕುರಿತು ಆತಂಕದೊಂದಿಗೆ ತೀರ್ಪುಗಳು ರೂಪುಗೊಂಡರೆ ನ್ಯಾಯಾಂಗ ಪರಿಶೀಲನೆಯು ವಸ್ತುನಿಷ್ಠವಾಗುವ ಬದಲು ಕೇವಲ ಸಾಂಕೇತಿಕವಾಗುವ ಅಪಾಯವಿದೆ ಎಂದರು.
ನ್ಯಾಯಾಂಗ ಸ್ವಾತಂತ್ರ್ಯದ ಕುರಿತು ಮಾತನಾಡಿದ ಅವರು, ಅದು ಕೇವಲ ಸಂವಿಧಾನಾತ್ಮಕ ರಕ್ಷಣೆಯಲ್ಲ. ನ್ಯಾಯಾಧೀಶರು ತಮ್ಮ ಹುದ್ದೆಯನ್ನು ಹೇಗೆ ನಿರ್ವಹಿಸುತ್ತಾರೆ ಎನ್ನುವುದರಲ್ಲಿಯೇ ಅದರ ನಿಜವಾದ ಅರ್ಥವಿದೆ. ಇದಕ್ಕೆ ಎರಡು ಆಯಾಮಗಳಿವೆ. ಮೊದಲನೆಯದು ಬಾಹ್ಯ ಪ್ರಭಾವದಿಂದ ಸ್ವಾತಂತ್ರ್ಯ. ಓರ್ವ ನ್ಯಾಯಾಧೀಶರು ರಾಜಕೀಯ ಒತ್ತಡ,ಸಾಂಸ್ಥಿಕ ಬೆದರಿಕೆ ಅಥವಾ ಜನಪ್ರಿಯ ಬೇಡಿಕೆಯಿಂದ ಮುಕ್ತರಾಗಿರಬೇಕು. ಎರಡನೆಯದು ನ್ಯಾಯಾಂಗದ ಒಳಗಿನ ಸ್ವಾತಂತ್ರ್ಯ. ರಾಜಕೀಯದಿಂದ ದೂರವಿರುವುದಷ್ಟೇ ನ್ಯಾಯಾಂಗ ಸ್ವಾತಂತ್ರ್ಯವಲ್ಲ. ಪ್ರತಿಯೊಬ್ಬ ನ್ಯಾಯಾಧೀಶರು ತಮ್ಮ ಸ್ವಂತ ಕಾನೂನು ಮನೋಭಾವವನ್ನು ರೂಪಿಸಿಕೊಳ್ಳಲು ಮತ್ತು ಅದು ಸಹೋದ್ಯೋಗಿಗಳ ಅಭಿಪ್ರಾಯದಿಂದ ಭಿನ್ನವಾಗಿದ್ದರೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಸ್ವತಂತ್ರರಾಗಿರಬೇಕು. ವಿಭಿನ್ನ ಮತ್ತು ಭಿನ್ನಾಭಿಪ್ರಾಯದ ತೀರ್ಪುಗಳು ಬೌದ್ಧಿಕ ಸ್ವಾಯತ್ತತೆಯ ಅಭಿವ್ಯಕ್ತಿಗಳಾಗಿವೆ. ಇದು ನ್ಯಾಯಾಂಗದ ಅತ್ಯುನ್ನತ ಸ್ವಾತಂತ್ರ್ಯವಾಗಿದೆ ಎಂದು ಹೇಳಿದರು.

