ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಗುರುವಾರ ಕೊನೆಯ ದಿನವಾಗಿತ್ತು. ನೇಮಂ ಕ್ಷೇತ್ರದಿಂದ ಬಿಜೆಪಿಯಿಂದ ಕಣಕ್ಕಿಳಿದಿರುವ ರಾಜ್ಯ ಘಟಕದ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ವಿರುದ್ಧ ಅವರದ್ದೇ ಹೆಸರಿನ ಡಮ್ಮಿ ಅಭ್ಯರ್ಥಿಯನ್ನು ಸಿಪಿಎಂ ಕಣಕ್ಕಿಳಿಸಿದೆ ಎಂದು ಬಿಜೆಪಿ ಆರೋಪಿಸಿದೆ.
'ಸಚಿವ ವಿ.ಶಿವನ್‌ಕುಟ್ಟಿ ಅವರು ಸಿಪಿಎಂ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಇದೀಗ ಪಕ್ಷದ ಶಾಖಾ ಕಾರ್ಯದರ್ಶಿ ರಾಜೀವ್ ಕುಮಾರ್ ಜಿ ಅವರನ್ನು ಪಕ್ಷೇತರರಾಗಿ ಕಣಕ್ಕಿಳಿಸುವ ಮೂಲಕ ಶಿವನ್‌ಕುಟ್ಟಿ ಅವರು ಕೀಳುಮಟ್ಟದ ರಾಜಕಾರಣ ನಡೆಸಿದ್ದಾರೆ' ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.
ರಾಜ್ಯ ವಿಧಾನಸಭೆಯ 140 ಕ್ಷೇತ್ರಗಳಲ್ಲಿ ಗುರುವಾರ ಸಂಜೆ ವೇಳೆಗೆ 890 ಮಂದಿ ಕಣದಲ್ಲಿ ಉಳಿದಿದ್ದಾರೆ. 2021ರಲ್ಲಿ 957 ಮಂದಿ ಕಣದಲ್ಲಿದ್ದರು.
ಕೊಯಿಕ್ಕೋಡ್‌ನ ಕೊಡವಲ್ಲಿ ಕ್ಷೇತ್ರದಲ್ಲಿ ಗರಿಷ್ಠ 13 ಮಂದಿ ಕಣದಲ್ಲಿದ್ದಾರೆ. ಆರು ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಮೂರು ಅಭ್ಯರ್ಥಿಗಳು ಸ್ಪರ್ಧಿಸಿರುವುದು ವಿಶೇಷ. ಹಲವು ಪಕ್ಷೇತರ ಅಭ್ಯರ್ಥಿಗಳು ಅಧಿಕೃತ ಅಭ್ಯರ್ಥಿಗಳಿಗೆ ತಲೆನೋವಾಗಿದ್ದಾರೆ.
ಪಿಣರಾಯಿ ವಿಜಯನ್ ವಿರುದ್ಧ ಎ.ಎಂ.ವಿಜಯನ್ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಬೇಪೋರ್ ಕ್ಷೇತ್ರದಿಂದ ಪಿಣರಾಯಿ ಅಳಿಯ ಪಿ.ಎ.ಮೊಹಮ್ಮದ್ ರಿಯಾಜ್ ಅವರು ಸಿಪಿಎಂನಿಂದ ಕಣದಲ್ಲಿದ್ದು, ಅವರ ಹೆಸರಿನ ನಾಲ್ವರು ಪಕ್ಷೇತರ ಅಭ್ಯರ್ಥಿಗಳಿಂದ ಸ್ಪರ್ಧೆ ಎದುರಿಸುತ್ತಿದ್ದಾರೆ.

