ನವದೆಹಲಿ: ತಮಿಳುನಾಡಿನ ರಾಜ್ಯಪಾಲ ಆರ್.ಎನ್.ರವಿ ಅವರನ್ನು ಪಶ್ಚಿಮ ಬಂಗಾಳದ ರಾಜ್ಯಪಾಲರನ್ನಾಗಿ ಗುರುವಾರ ನೇಮಿಸಲಾಗಿದೆ. ಸಿ.ವಿ. ಆನಂದ ಬೋಸ್ ಅವರ ರಾಜೀನಾಮೆ ಸ್ವೀಕಾರದ ಬಳಿಕ ಅವರ ಸ್ಥಾನಕ್ಕೆ ರವಿ ಅವರನ್ನು ನೇಮಕಗೊಳಿಸಲಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕಚೇರಿ ತಿಳಿಸಿದೆ.
ಪಶ್ಚಿಮ ಬಂಗಾಳ ಮಾತ್ರವಲ್ಲದೇ, ಬಿಹಾರ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕಗೊಳಿಸಿ ಮುರ್ಮು ಅವರು ಆದೇಶ ಹೊರಡಿಸಿದ್ದಾರೆ.
ಕೇರಳ ರಾಜ್ಯಪಾಲರಾದ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ತಮಿಳುನಾಡಿನ ರಾಜ್ಯಪಾಲರ ಕರ್ತವ್ಯಗಳನ್ನೂ ನಿರ್ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಲೆಫ್ಟಿನೆಂಟ್ ಜನರಲ್ ಸಯ್ಯದ್ ಅತಾ ಹಸನೈನ್ ಅವರನ್ನು ಬಿಹಾರದ ನೂತನ ರಾಜ್ಯಪಾಲರನ್ನಾಗಿ ನೇಮಿಸಲಾಗಿದ್ದು, ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ವಿ.ಕೆ.ಸಕ್ಸೇನಾ ಅವರನ್ನು ಲಡಾಖ್‌ನ ಲೆಫ್ಟಿನೆಂಟ್ ಗವರ್ನರ್ ಕವಿಂದರ್ ಗುಪ್ತಾ ಅವರ ಸ್ಥಾನಕ್ಕೆ ನೇಮಿಸಲಾಗಿದೆ.
ಗುಪ್ತಾ ಅವರನ್ನು ಹಿಮಾಚಲ ಪ್ರದೇಶದ ರಾಜ್ಯಪಾಲರನ್ನಾಗಿ ನೇಮಿಸಿ, ತರಣ್‌ಜಿತ್ ಸಿಂಗ್ ಸಂಧು ಅವರನ್ನು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕ ಮಾಡಲಾಗಿದೆ.
ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿದ್ದ ಶಿವ ಪ್ರತಾಪ ಶುಕ್ಲಾ ಅವರನ್ನು ತೆಲಂಗಾಣದ ರಾಜ್ಯಪಾಲರಾದ ಜಿಷ್ಣು ದೇವ್ ವರ್ಮಾ ಅವರ ಸ್ಥಾನಕ್ಕೆ ನೇಮಿಸಿ, ಜಿಷ್ಣು ಅವರನ್ನು ಮಹಾರಾಷ್ಟ್ರದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ನಂದ ಕಿಶೋರ್ ಯಾದವ್ ಅವರನ್ನು ನಾಗಾಲ್ಯಾಂಡ್‌ನ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

