ನವದೆಹಲಿ: ಭಾರತದ ಧ್ವಜ ಹೊಂದಿರುವ ಮತ್ತೆರಡು ಎಲ್‌ಪಿಜಿ ಟ್ಯಾಂಕರ್‌ಗಳು ಹೊರ್ಮುಜ್ ಜಲಸಂಧಿಯಿಂದ ಭಾರತದ ಬಂದರುಗಳತ್ತ ತಮ್ಮ ಪ್ರಯಾಣ ಆರಂಭಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಮಧ್ಯಾಹ್ನ 'ಪೈನ್ ಗ್ಯಾಸ್' ಮತ್ತು 'ಜಗ ವಸಂತ' ಎಂಬ ಹೆಸರಿನ ತೈಲ ಟ್ಯಾಂಕರ್‌ಗಳು ಇರಾನ್‌ನ ಲಾರಕ್ ಮತ್ತು ಕೇಶ್ಮ್ ದ್ವೀಪಗಳ ನಡುವೆ ಹಾದು ಹೋಗಿವೆ.
ಜಲಸಂಧಿಯನ್ನು ದಾಟುವ ಮೊದಲು ಇರಾನ್ ಅಧಿಕಾರಿಗಳಿಗೆ ತಮ್ಮ ಗುರುತನ್ನು ಸ್ಪಷ್ಟಪಡಿಸುವ ಉದ್ದೇಶದಿಂದ ಈ ಹಡಗುಗಳು ಈ ಮಾರ್ಗವನ್ನು ಅನುಸರಿಸಿರಬಹುದು ಎಂದು ಹೇಳಲಾಗಿದೆ.
ಜಲಸಂಧಿಯಲ್ಲಿ ಸಿಲುಕಿಕೊಂಡಿದ್ದ 28 ಹಡಗುಗಳು:
ಪಶ್ಚಿಮ ಏಷ್ಯಾದಲ್ಲಿ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧ ಆರಂಭವಾದಾಗ ಹೊರ್ಮುಜ್ ಜಲಸಂಧಿಯಲ್ಲಿ ಭಾರತದ ಧ್ವಜ ಹೊಂದಿದ್ದ ಒಟ್ಟು 28 ಹಡಗುಗಳು ಸಿಲುಕಿಕೊಂಡಿದ್ದವು. ಇವುಗಳಲ್ಲಿ 24 ಹಡಗುಗಳು ಜಲಸಂಧಿಯ ಪಶ್ಚಿಮ ಭಾಗದಲ್ಲಿದ್ದರೆ, ನಾಲ್ಕು ಹಡಗುಗಳು ಪೂರ್ವ ಭಾಗದಲ್ಲಿದ್ದವು. ಕಳೆದ ಕೆಲವು ದಿನಗಳಲ್ಲಿ ಪೂರ್ವ ಮತ್ತು ಪಶ್ಚಿಮ ಭಾಗದಿಂದ ತಲಾ ಎರಡು ಹಡಗುಗಳು ಸುರಕ್ಷಿತವಾಗಿ ಪ್ರಯಾಣ ಬೆಳೆಸುವಲ್ಲಿ ಯಶಸ್ವಿಯಾಗಿವೆ.
ಮಾರ್ಚ್ 16ರಂದು ಎಲ್‌ಪಿಜಿ ಹೊತ್ತ ಹಡಗು 'ಶಿವಾಲಿಕ್', ಗುಜರಾತ್‌ನ ಮುದ್ರಾ ಬಂದರನ್ನು ತಲುಪಿದರೆ, ಮರುದಿನ 'ನಂದಾದೇವಿ' ಗುಜರಾತ್‌ನ ಕಾಂಡ್ಲಾ ಬಂದರನ್ನು ತಲುಪಿತ್ತು. ಈ ಎರಡು ಹಡಗುಗಳು ಮಾರ್ಚ್ 13ರಂದು ಪ್ರಯಾಣ ಆರಂಭಿಸಿ, ಮಾರ್ಚ್ 14ರ ಮುಂಜಾನೆ ಹೊರ್ಮುಜ್ ಜಲಸಂಧಿಯನ್ನು ದಾಟಿದ್ದವು.
ಯುಎಇಯಿಂದ 80,886 ಟನ್ ಕಚ್ಚಾ ತೈಲ ಹೊತ್ತಿದ್ದ ಭಾರತದ 'ಜಗ ಲಾಡ್ಕಿ', ಮಾರ್ಚ್ 18ರಂದು ಮುದ್ರಾ ತಲುಪಿದೆ. ಒಮಾನ್‌ನಿಂದ ಆಫ್ರಿಕಾಕ್ಕೆ ಗ್ಯಾಸೋಲಿನ್ ಸಾಗಿಸುತ್ತಿದ್ದ ಮತ್ತೊಂದು ಟ್ಯಾಂಕರ್ 'ಜಗ ಪ್ರಕಾಶ' ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿದ್ದು, ತಾಂಜಾನಿಯಾದತ್ತ ಸಾಗುತ್ತಿದೆ.
ಉಳಿದ ಹಡಗುಗಳ ವಿವರ:
ಉಳಿದಿರುವ 24 ಹಡಗುಗಳ ಪೈಕಿ 22 ಹಡಗುಗಳು ಜಲಸಂಧಿಯ ಪಶ್ಚಿಮ ಭಾಗದಲ್ಲಿವೆ. ಈ ಹಡುಗುಗಳಲ್ಲಿ ಒಟ್ಟು 611 ನಾವಿಕರಿದ್ದಾರೆ. ಇನ್ನುಳಿದ ಎರಡು ಹಡಗುಗಳು ಪೂರ್ವ ಭಾಗದಲ್ಲಿವೆ.
ಪಶ್ಚಿಮ ಭಾಗದಲ್ಲಿರುವ 22 ಹಡಗುಗಳಲ್ಲಿ 6 ಎಲ್‌ಪಿಜಿ ನೌಕೆಗಳಾಗಿದ್ದು, ಅವುಗಳಲ್ಲಿ ಎರಡು (ಪೈನ್ ಗ್ಯಾಸ್ ಮತ್ತು ಜಗ ವಸಂತ) ಈಗ ಭಾರತಕ್ಕೆ ಪ್ರಯಾಣ ಬೆಳೆಸಿವೆ.
ಉಳಿದ ಹಡಗುಗಳಲ್ಲಿ ಒಂದು ಎಲ್‌ಎನ್‌ಜಿ (ದ್ರವೀಕೃತ ನೈಸರ್ಗಿಕ ಅನಿಲ) ಟ್ಯಾಂಕರ್, ನಾಲ್ಕು ಕಚ್ಚಾ ತೈಲ ಟ್ಯಾಂಕರ್, ಒಂದು ರಾಸಾಯನಿಕ ಉತ್ಪನ್ನಗಳ ಸಾಗಣೆ ನೌಕೆ, ಮೂರು ಕಂಟೈನರ್ ಹಡಗುಗಳು ಮತ್ತು ಎರಡು ಬಲ್ಕ್ ಕ್ಯಾರಿಯರ್‌ಗಳಾಗಿವೆ. ಇವುಗಳ ಜೊತೆಗೆ ಒಂದು ಡ್ರೆಜ್ಜರ್, ಒಂದು ಖಾಲಿ ಹಡಗು ಮತ್ತು ಮೂರು ಹಡಗುಗಳನ್ನು ನಿರ್ವಹಣೆಗಾಗಿ ಡ್ರೈ ಡಾಕ್‌ನಲ್ಲಿ ಇಡಲಾಗಿದೆ.

