ಬೆಂಗಳೂರು : ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ನಿವೃತ್ತ ಸಂಶೋಧಕರೊಬ್ಬರಿಗೆ ಕರೆ ಮಾಡಿ ಹೆದರಿಸಿ ಡಿಜಿಟಲ್ ಅರೆಸ್ಟ್ ಮೂಲಕ 4.91 ಕೋಟಿ ರೂ.ಗಳನ್ನು ಸೈಬರ್ ವಂಚಕರು ದೋಚಿರುವ ಪ್ರಕರಣ ಬೆಂಗಳೂರು ನಗರದಲ್ಲಿ ಬೆಳಕಿಗೆ ಬಂದಿದೆ.
ಹಣ ಕಳೆದುಕೊಂಡಿರುವ 94 ವರ್ಷದ ನಿವೃತ್ತ ಸಂಶೋಧಕ ಮಾರ್ಚ್ 8ರಂದು ದೂರು ನೀಡಿದ್ದು, ಈ ಸಂಬಂಧ ಬೆಂಗಳೂರು ಕೇಂದ್ರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಶೋಕ ನಗರ ಠಾಣಾ ವ್ಯಾಪ್ತಿಯ ವಿಕ್ಟೋರಿಯಾ ರಸ್ತೆಯಲ್ಲಿರುವ ಅಪಾರ್ಟ್‍ಮೆಂಟ್‍ವೊಂದರಲ್ಲಿ ಪತ್ನಿಯೊಂದಿಗೆ ದೂರುದಾರರು ನೆಲೆಸಿದ್ದರು. 2025ರ ಡಿಸೆಂಬರ್ 2ರಂದು ದೂರುದಾರರ ಮನೆಯ ಲ್ಯಾಂಡ್‍ಲೈನ್ ಫೋನ್‍ಗೆ ಕರೆ ಮಾಡಿದ್ದ ಆರೋಪಿ, 'ನಿಮ್ಮ ವಿರುದ್ಧ ಬಳ್ಳಾರಿ ಪೊಲೀಸ್ ಠಾಣೆಯಲ್ಲಿ ಮಾನವ ಕಳ್ಳ ಸಾಗಣೆ ಸಂಬಂಧ ಪ್ರಕರಣ ದಾಖಲಾಗಿದ್ದು, ಇನ್‍ಸ್ಪೆಕ್ಟರ್ ಕರೆ ಮಾಡುತ್ತಾರೆ' ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದ.
ನಂತರ, ಸಂದೀಪ್ ರಾವ್ ಹೆಸರಿನ ಮತ್ತೋರ್ವ ವ್ಯಕ್ತಿ, ದೂರುದಾರರಿಗೆ ಕರೆ ಮಾಡಿ, 'ನಾನು ಸಿಬಿಐ ಅಧಿಕಾರಿ' ಎಂದು ಪರಿಚಯಿಸಿಕೊಂಡು ಆಧಾರ್ ಕಾರ್ಡ್ ಪ್ರತಿಯನ್ನು ವಾಟ್ಸಪ್‍ನಲ್ಲಿ ಕಳುಹಿಸುವಂತೆ ಸೂಚಿಸಿದ್ದ.
ಇದಾದ ಬಳಿಕ ಪ್ರಕರಣ ದಾಖಲಾಗಿರುವಂತೆ ನಕಲಿ ಎಫ್‍ಐಆರ್ ಪ್ರತಿ ಕಳುಹಿಸಿದ್ದ ಆರೋಪಿಗಳು, ಬೇರೆ ಬೇರೆ ಮೊಬೈಲ್ ಸಂಖ್ಯೆಗಳಿಂದ ವಿಡಿಯೋ ಕರೆ ಮಾಡಿದ್ದಾರೆ. ಬಳಿಕ 2025ರ ಡಿಸೆಂಬರ್ 17ರಿಂದ 2026ರ ಫೆಬ್ರವರಿ 23ರ ನಡುವೆ ವಿಚಾರಣೆ ಸೋಗಿನಲ್ಲಿ ಹಂತ ಹಂತವಾಗಿ 4.91 ಕೋಟಿ ರೂ. ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಅದಾದ ಮೇಲೂ ಆರೋಪಿಗಳು ಇನ್ನೂ ಹೆಚ್ಚಿನ ಹಣಕ್ಕೆ ಬೇಡಿಕೆಯಿಡಲಾರಂಭಿಸಿದಾಗ ಅನುಮಾನಗೊಂಡ ದೂರುದಾರರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದೂರುದಾರರು ಆರ್ ಟಿಜಿಎಸ್ ಮೂಲಕ ಹಣ ವರ್ಗಾವಣೆ ಮಾಡಿರುವುದು ಪತ್ತೆಯಾಗಿದೆ. ಹಣ ವರ್ಗಾವಣೆ ಆಗಿರುವ ಖಾತೆಗಳು ನಕಲಿ (ಮ್ಯೂಲ್ ಅಕೌಂಟ್) ಎಂಬುದು ಪತ್ತೆಯಾಗಿದೆ. ಖಾತೆಗಳ ವಾರಸುದಾರರನ್ನು ಪತ್ತೆ ಹಚ್ಚುವ ಕೆಲಸ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಹಿಂದಿನ ಎರಡು ತಿಂಗಳಲ್ಲಿ ಈ ರೀತಿ ಹಿರಿಯ ನಾಗರಿಕರನ್ನು ಗುರಿಯಾಗಿಸಿಕೊಂಡು ವಂಚಿಸಿರುವ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

