ನವದೆಹಲಿ: ಇರಾನ್ ಜೊತೆಗಿನ ನೇರ ಮಾತುಕತೆಯು ಹೊರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸುಗಮ ಸಂಚಾರಕ್ಕೆ ಪರಿಣಾಮಕಾರಿ ಮಾರ್ಗವಾಗಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ. ಭಾರತದ ಧ್ವಜವಿದ್ದ ಎರಡು ಹಡಗುಗಳ ಸಂಚಾರಕ್ಕೆ ಇರಾನ್ ಅನುವು ಮಾಡಿಕೊಟ್ಟ ವಿಚಾರವನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಈ ವಿಚಾರದ ಬಗ್ಗೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ ಅವರು, 'ಇದು ವಿನಿಮಯದ ವಿಚಾರ ಅಲ್ಲ. ಮೊದಲಿಂದಲೂ ಭಾರತ ಮತ್ತು ಇರಾನ್ ನಡುವೆ ಸಂಬಂಧವಿದೆ. ಇದರ ಆಧಾರದ ಮೇಲೆ ನಾನು ಮಾತುಕತೆ ನಡೆಸುತ್ತಿದ್ದೇನೆ. ಕೆಲವು ಮಾತುಕತೆ ಫಲ ಕೊಟ್ಟಿದ್ದು, ಈ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ. ಮಾತುಕತೆಯಿಂದ ಎಲ್ಲವೂ ಸಾಧ್ಯವಾಗುತ್ತದೆ ಎಂದರೆ ಸಹಜವಾಗಿ ನಾನು ಅದೇ ನಿಟ್ಟಿನಲ್ಲಿ ಮುಂದುವರಿಯುತ್ತೇನೆ' ಎಂದರು.
'ಇವುಗಳು ಇನ್ನೂ ಆರಂಭಿಕ ದಿನಗಳಷ್ಟೇ. ನಮ್ಮ ಹಲವು ಹಡಗುಗಳು ಅಲ್ಲಿವೆ. ಈಗ ಎರಡು ಹಡಗುಗಳನ್ನು ಬಿಟ್ಟಿರುವುದು ಸ್ವಾಗತಾರ್ಹ ಬೆಳವಣಿಗೆ. ಹಾಗೆಯೇ, ಮಾತುಕತೆ ಮುಂದುವರಿಯುತ್ತಿದೆ. ಕಳೆದ ವಾರ, ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಜೊತೆಗೆ ಮಾತನಾಡಿ, ಇಂಧನ ಮತ್ತು ಸರಕುಗಳ ಸಾಗಣೆ ಬಗ್ಗೆ ಚರ್ಚಿಸಿದ್ದರು. ಅದೇ ವೇಳೆಗೆ, ಭಾರತ ಧ್ವಜವಿರುವ ಹಾಗೂ ಎಲ್‌ಪಿಜಿ ಟ್ಯಾಂಕರ್‌ಗಳನ್ನು ಹೊತ್ತ ಎರಡು ಹಡುಗಗಳು ಹಾರ್ಮುಜ್ ಜಲಸಂಧಿ ಮೂಲಕ ಅರೇಬಿಯನ್ ಸಮುದ್ರ ಪ್ರವೇಶಿಸಲು ಇರಾನ್ ಅವಕಾಶ ನೀಡಿತು' ಎಂದು ಜೈಶಂಕರ್ ಎಂದರು,

