ನವದೆಹಲಿ: ಕೋವಿಡ್ ವಿರುದ್ಧದ ಲಸಿಕೆಯಿಂದಾದ ಗಂಭೀರ ಪ್ರತಿಕೂಲ ಪರಿಣಾಮಗಳಿಗೆ ಸಂಬಂಧಿಸಿದಂತೆ ದೋಷರಹಿತ ಪರಿಹಾರ ನೀತಿಯೊಂದನ್ನು ರೂಪಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೋಮವಾರ ಸೂಚನೆ ನೀಡಿದೆ.
ಕೋವಿಡ್ ಲಸಿಕೆಯ ಪ್ರತಿಕೂಲ ಪರಿಣಾಮಗಳ ಬಗ್ಗೆ ವೈಜ್ಞಾನಿಕ ಪರಿಶೀಲನೆಗೆ ಸದ್ಯ ಜಾರಿಯಲ್ಲಿರುವ ವ್ಯವಸ್ಥೆಯೇ ಮುಂದುವರಿಯಲಿದೆ.
ಇದಕ್ಕಾಗಿ ಪ್ರತ್ಯೇಕ ತಜ್ಞರ ಸಮಿತಿಯನ್ನು ರಚಿಸುವ ಅಗತ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ವಿಕ್ರಂನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಅಭಿಪ್ರಾಯಪಟ್ಟಿತು.
ಕೋವಿಡ್ ಲಸಿಕೆಯು ವ್ಯಕ್ತಿಯ ರೋಗನಿರೋಧಕ ಶಕ್ತಿಯ ಮೇಲೆ ಬೀರಿರುವ ಪ್ರತಿಕೂಲ ಪರಿಣಾಮಗಳ ಬಗ್ಗೆ ವೈಜ್ಞಾನಿಕ ಅಧ್ಯಯನಕ್ಕೆ ಸದ್ಯ ಅಸ್ತಿತ್ವದಲ್ಲಿರುವ ಕಾರ್ಯವಿಧಾನವನ್ನೇ ಮುಂದುವರಿಸಬಹುದು ಎಂದು ನ್ಯಾಯಮೂರ್ತಿ ವಿಕ್ರಂನಾಥ್ ಹೇಳಿದರು.
'ಕೋವಿಡ್ ವಿರುದ್ಧದ ಲಸಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ತಪ್ಪಾಗಿದೆ ಅಥವಾ ಹೊಣೆಗಾರಿಕೆಯ ರೀತಿಯಲ್ಲಿ 'ದೋಷರಹಿತ ಪರಿಹಾರ ನೀತಿ' ರೂಪಿಸಲಾಗುತ್ತಿದೆ ಎಂದು ಕೋರ್ಟ್ ಆದೇಶವನ್ನು ಅರ್ಥೈಸಬಾರದು. ಜತೆಗೆ ಈ ಆದೇಶವು ಕೋವಿಡ್ ಲಸಿಕೆಯ ಪ್ರತಿಕೂಲ ಪರಿಣಾಮಗಳಿಗೆ ಸಂಬಂಧಿಸಿದಂತೆ ಕಾನೂನಡಿ ಲಭ್ಯವಿರುವ ಇತರೆ ಪರಿಹಾರಗಳನ್ನು ಪಡೆಯಲು ತಡೆಹಾಕುವುದಿಲ್ಲ' ಎಂದೂ ನ್ಯಾಯಪೀಠ ಸ್ಪಷ್ಟಪಡಿಸಿದೆ.
'ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಪಡೆದ ನಂತರ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. ಲಸಿಕೆ ಹಾಕಿಸಿಕೊಂಡ ನಂತರ ಇವರಿಬ್ಬರಲ್ಲಿ ಗಂಭೀರ ಪ್ರತಿಕೂಲ ಪರಿಣಾಮಗಳು ಕಂಡುಬಂದಿದ್ದೇ ಸಾವಿಗೆ ಕಾರಣ' ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಕೋರ್ಟ್ ಮೊರೆ ಹೋಗಿದ್ದರು.

