ಜಮ್ಮು: ಪಾಕಿಸ್ತಾನದ ಡ್ರೋನ್ ಅಂತರರಾಷ್ಟ್ರೀಯ ಗಡಿಯನ್ನು ದಾಟಿ, ಭಾರತದ ಭೂಪ್ರದೇಶವನ್ನು ಪ್ರವೇಶಿಸಿದ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಹಳ್ಳಿಗಳಲ್ಲಿ ಭದ್ರತಾ ಪಡೆಗಳು ಶನಿವಾರ ತೀವ್ರ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ತಡರಾತ್ರಿ ರಾಮಗಢ ವಲಯದ ಕಂಡ್ರಾಲ್, ಅಬ್ತಾಲ್ ಮತ್ತು ಬಹದ್ದೂರ್‌ಪುರ ಗ್ರಾಮಗಳ ಮೇಲೆ ಪಾಕಿಸ್ತಾನದ ಡ್ರೋನ್ ಕೆಲವು ನಿಮಿಷಗಳ ಕಾಲ ಹಾರಾಟ ನಡೆಸಿತ್ತು. ಹೀಗಾಗಿ ಈ ಪ್ರದೇಶಗಳನ್ನು ಕಣ್ಗಾವಲಿನಲ್ಲಿ ಇರಿಸಲಾಗಿದೆ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ಅಂತರರಾಷ್ಟ್ರೀಯ ಗಡಿ ಬಳಿ ಡ್ರೋನ್ ಮೂಲಕ ಎಸೆಯಲಾದ ₹12 ಕೋಟಿ ಮೌಲ್ಯದ 2 ಕೆ.ಜಿಯಷ್ಟು ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದರು.
ಬಿಷ್ಣಾಹ್ ಪ್ರದೇಶದ ಬಹದೂರ್‌ಪುರ ಗ್ರಾಮದಲ್ಲಿನ ಕೃಷಿ ಜಮೀನಿನಲ್ಲಿ ಬುಧವಾರ ರಾತ್ರಿ ಹೆರಾಯಿನ್ ಪತ್ತೆಯಾಗಿತ್ತು. ಜಮ್ಮು ಪೊಲೀಸರು ಹಾಗೂ ಗಡಿ ಭದ್ರತಾ ಪಡೆಯ ಕಾರ್ಯಾಚರಣೆ ನಡೆಸಿ ಅದನ್ನು ವಶಪಡಿಸಿಕೊಂಡರು.

