ಬಾಗ್ದಾದ್: ಪ್ರಶಸ್ತಿ ಪುರಸ್ಕೃತ ಇರಾಕ್‌ನ ಮಹಿಳಾ ಹಕ್ಕುಗಳ ಕಾರ್ಯಕರ್ತೆ ಯಾನಾರ್ ಮೊಹಮ್ಮದ್ ಅವರನ್ನು ಬಾಗ್ದಾದ್‌ನಲ್ಲಿ ಸೋಮವಾರ ಗುಂಡಿಕ್ಕಿ ಹತ್ಯೆಗೈಯಲಾಗಿದೆ ಎಂದು ಅವರು ನಡೆಸುತ್ತಿದ್ದ ಸಂಘಟನೆಯೊಂದು ತಿಳಿಸಿದೆ.
ಬೆಳಗ್ಗೆ 9:00 ಗಂಟೆಯ ವೇಳೆಗೆ ಮೋಟಾರ್‌ಸೈಲ್‌ನಲ್ಲಿ ಆಗಮಿಸಸಿದ ಇಬ್ಬರು ಬಂದೂಕುಧಾರಿಗಳು ಆಕೆಯ ನಿವಾಸದ ಹೊರಗೆ ಗುಂಡುಹಾರಾಟ ನಡೆಸಿದರೆಂದು, ಇರಾಕ್‌ನಲ್ಲಿನ ಮಹಿಳಾ ಹಕ್ಕುಗಳ ಸಂಘಟನೆ (ಒಡಬ್ಲ್ಯುಎಫ್‌ಐ) ವರದಿ ಮಾಡಿದೆ.
ಗುಂಡಿನ ದಾಳಿಯಲ್ಲಿ ಯಾನಾರ್ ಅವರಿಗೆ ಗಂಭೀರವಾದ ಗಾಯಗಳಾಗಿದ್ದು, ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ,ಅಲ್ಲಿ ಅವರು ಕೊನೆಯುಸಿರೆಳೆದರೆಂದು'' ಓಡಬ್ಲ್ಯುಎಫ್‌ಐ ಹೇಳಿಕೆ ತಿಳಿಸಿದೆ.
ಹಿಂಸಾಚಾರದಿಂದ ಸಂತ್ರಸ್ತರಾದ ಮಹಿಳೆಯರಿಗೆ ರಕ್ಷಣೆನ್ನು ನೀಡುವ ಉದ್ದೇಶದೊಂದಿಗೆ 2003ರಲ್ಲಿ ಸ್ಥಾಪನೆಯಾದ ಓಡಬ್ಲ್ಯುಎಫ್‌ಐಗೆ ಯಾನಾರ್ ಅವರು ಸಹಸಂಸ್ಥಾಪಕಿಯಾಗಿದ್ದರು.
ಇರಾಕ್‌ನಲ್ಲಿ ಅಲ್ಪಸಂಖ್ಯಾತರು ಹಾಗೂ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ನೆರವಾಗುವಲ್ಲಿ ಯಾನಾರ್ ಅವರ ಸಾಧನೆಯನ್ನು ಪರಿಗಣಿಸಿ 2016ರಲ್ಲಿ ನಾರ್ವೆಯ ಮಾನವಹಕ್ಕುಗಳಿಗಾಗಿನ ಪ್ರತಿಷ್ಠಿತ ರಾಫ್ಟೊ ಪ್ರಶಸ್ತಿಯನ್ನು ಯಾನಾರ್ ಅವರಿಗೆ ನೀಡಲಾಗಿತ್ತು.

