ಗುವಾಹಟಿ: ಮೈತೇಯಿ ಮತ್ತು ಕುಕಿ ಸಮುದಾಯದವರ ಮುಕ್ತ ಸಂಚಾರವನ್ನು ಪುನರ್‌ಸ್ಥಾಪಿಸಲು ಮಣಿಪುರದ ಹೊಸ ಸರ್ಕಾರವು ಕಳೆದ ಒಂದು ತಿಂಗಳಿನಿಂದ ನಡೆಸಿದ ಪ್ರಯತ್ನಗಳು ಅಷ್ಟಾಗಿ ಫಲ ನೀಡದ ಕಾರಣ, ಉಪಮುಖ್ಯಮಂತ್ರಿ ನೆಮ್ಚಾ ಕಿಪ್ಗೆನ್ ಸೇರಿದಂತೆ ಕುಕಿ ಸಮುದಾಯದ ಆರು ಶಾಸಕರು ಸೋಮವಾರ ನಡೆದ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ವರ್ಚುವಲ್ ಮೂಲಕ ಭಾಗವಹಿಸಿದರು.
ಸೋಮವಾರದಿಂದ ಆರಂಭವಾದ ಅಧಿವೇಶನವು ಮಾರ್ಚ್ 17ರಂದು ಮುಕ್ತಾಯಗೊಳ್ಳಲಿದೆ. ಫೆಬ್ರುವರಿ 20ರಂದು ವುಂಗ್‌ಜಾಗಿನ್ ವಾಲ್ಟೆ ಅವರ ಸಾವಿನ ನಂತರ ಮಣಿಪುರದಲ್ಲಿ ಕುಕಿ ಸಮುದಾಯದ ಶಾಸಕರ ಸಂಖ್ಯೆ ಒಂಬತ್ತಕ್ಕೆ ಇಳಿದಿದೆ.
ಚುರಾಚಾಂದಪುರ ಜಿಲ್ಲೆಯ ಥಾನಲನ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ವಾಲ್ಟೆ ಅವರು ಇಂಫಾಲ್‌ನಲ್ಲಿ 2023ರ ಮೇ 4ರಂದು ಮೈತೇಯಿ ಸಮುದಾಯದವರು ನಡೆಸಿದ್ದ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ನಂತರ, ದೆಹಲಿಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಸುಮಾರು ಒಂದು ವರ್ಷದ ರಾಷ್ಟ್ರಪತಿ ಆಳ್ವಿಕೆಯ ನಂತರ, ವೈ.ಖೇಮಚಂದ್ ಸಿಂಗ್ ಅವರು ಫೆಬ್ರುವರಿ 4ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಕಿಪ್ಗೆನ್ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನವನ್ನು ನವದೆಹಲಿಯಲ್ಲಿರುವ ಮಣಿಪುರ ಭವನದಿಂದ ವರ್ಚುವಲ್ ಆಗಿ ಸ್ವೀಕರಿಸಿದ್ದರು. ಅಂದಿನಿಂದ ಕಿಪ್ಗೆನ್ ಮತ್ತು ಕುಕಿ ಸಮುದಾಯದ ಇತರ ಶಾಸಕರು ಮಣಿಪುರಕ್ಕೆ ಭೇಟಿ ನೀಡಿರಲಿಲ್ಲ.

