ನವದೆಹಲಿ: ತರಗತಿಗಳಲ್ಲಿ ವಿದ್ಯಾರ್ಥಿಗಳ ಗಮನ ಕಡಿಮೆಯಾಗುತ್ತಿರುವುದು ಹಾಗೂ ಸೈಬರ್ ಬೆದರಿಕೆ ಹಿನ್ನೆಲೆ ವಿಶ್ವದ ಅರ್ಧಕ್ಕಿಂತ ಹೆಚ್ಚು ದೇಶಗಳು ಶಾಲೆಗಳಲ್ಲಿ ಮೊಬೈಲ್ ಫೋನ್‌ಗಳನ್ನು ನಿಷೇಧಿಸಿವೆ ಎಂದು ಯುನೆಸ್ಕೊದ (UNSECO) ಗ್ಲೋಬಲ್ ಎಜುಕೇಶನ್ ಮಾನಿಟರಿಂಗ್ (GEM) ತಂಡ ತಿಳಿಸಿದೆ.
ಸಾಮಾಜಿಕ ಮಾಧ್ಯಮ ಬಳಕೆಯಿಂದ ಉಲ್ಬಣಗೊಳ್ಳುವ ಈಟಿಂಗ್ ಡಿಸಾರ್ಡರ್‌ಗೆ (ಆಹಾರ ಸೇವಿಸಲು ತೊಂದರೆ) ಬಾಲಕಕರಿಗಿಂತ ಬಾಲಕಿಯರು ಎರಡು ಪಟ್ಟು ಹೆಚ್ಚು ಒಳಗಾಗುವ ಸಾಧ್ಯತೆ ಇದೆ ತಂಡವು ಹೇಳಿದೆ.
ಫೇಸ್‌ಬುಕ್ ನಡೆಸಿದ ಸಂಶೋಧನೆಯ ಪ್ರಕಾರ, ಇನ್‌ಸ್ಟಾಗ್ರಾಮ್ ಬಳಸಿದ ಬಳಿಕ ಶೇ 32ರಷ್ಟು ಹದಿಹರೆಯದ ಹುಡುಗಿಯರು ತಮ್ಮ ದೇಹದ ಕೀಳರಿಮೆ ಭಾವನೆ ಹೊಂದಿದ್ದಾರೆ ಎನ್ನಲಾಗಿದೆ
ಇತ್ತೀಚಿನ ವರದಿಯ ಪ್ರಕಾರ 114 ದೇಶಗಳು ಶಾಲೆಗಳಲ್ಲಿ ಮೊಬೈಲ್ ಫೋನ್‌ಗಳ ಮೇಲೆ ನಿಷೇಧವನ್ನು ಹೇರಿವೆ. ಅಂದರೆ ಪ್ರಪಂಚದ ಶೇ 58ರಷ್ಟು ದೇಶಗಳು. 2023ರ ಜೂನ್‌ನಲ್ಲಿ ಜಿಇಎಮ್ ವರದಿಯಲ್ಲಿ ಮೊದಲ ಬಾರಿಗೆ ಈ ವಿಷಯವನ್ನು ಪರಿಶೀಲಿಸಲಾಗಿದ್ದು, ಈ ಅವಧಿಯಲ್ಲಿ 4 ದೇಶಗಳಲ್ಲಿ ಒಂದಕ್ಕಿಂತ ಕಡಿಮೆ (24 ಶೇಕಡಾ) ದೇಶಗಳಲ್ಲಿ ಮಾತ್ರ ನಿಷೇಧ ಇತ್ತು. 2025ರ ಆರಂಭದ ವೇಳೆಗೆ, ಇದು ಶೇ40ಕ್ಕೆ ಏರಿಕೆಯಾಯಿತು. 2026ರ ಮಾರ್ಚ್ ಹೊತ್ತಿಗೆ, ಆ ಪ್ರಮಾಣವು ಸುಮಾರು ಶೇ 20ರಷ್ಟು ಹೆಚ್ಚಾಗಿದೆ ಎಂದು ಜಿಇಎಂನ ಹಿರಿಯ ಸದಸ್ಯರೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಈ ಬೆಳವಣಿಗೆಯು ತರಗತಿಗಳಲ್ಲಿ ಗಮನ ಕಡಿಮೆಯಾಗುವುದು, ಸೈಬರ್ ಬೆದರಿಕೆ ಮತ್ತು ಮಕ್ಕಳ ಮೇಲೆ ಡಿಜಿಟಲ್‌ನ ವ್ಯಾಪಕ ಪ್ರಭಾವದ ಬಗ್ಗೆ ಹೆಚ್ಚುತ್ತಿರುವ ಕಳವಳಗಳನ್ನು ಪ್ರತಿಬಿಂಬಿಸುತ್ತದೆ ಎಂದೂ ಅವರು ಪ್ರತಿಪಾದಿಸಿದ್ದಾರೆ.
2025ರ ಕೊನೆಯ ಭಾಗದಲ್ಲಿ ಹಲವಾರು ದೇಶಗಳು ಶಾಲೆಗಳಲ್ಲಿ ಫೋನ್ ಬಳಕೆಗೆ ನಿಷೇಧ ಹೇರಿವೆ. ಅವುಗಳಲ್ಲಿ ಬೊಲಿವಿಯಾ, ಕೋಸ್ಟರಿಕಾ, ಕ್ರೊವೇಷ್ಯಾ, ಜಾರ್ಜಿಯಾ, ಮಾಲ್ಡೀವ್ಸ್ ಮತ್ತು ಮಾಲ್ಟಾ ಸೇರಿವೆ.
ಈ ವಿಚಾರದ (ಫೋನ್ ನಿಷೇಧ) ಫ್ರಾನ್ಸ್‌ನಲ್ಲಿ ಇನ್ನೂ ಚರ್ಚೆ ಮುಂದುವರಿದಿದೆ. ಶಾಲೆಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸುವ ಮೊದಲ ಹಂತದ ಭಾಗವಾಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಿದೆ.
ಇನ್ನಷ್ಟು ನಿಯಂತ್ರಣದ ಅಗತ್ಯವಿದೆಯೇ ಎಂಬ ಬಗ್ಗೆಯೂ ಅಲ್ಲಿ ಚರ್ಚೆ ನಡೆಯುತ್ತಿದೆ. ಫ್ರೆಂಚ್ ಸಂಸತ್ತಿನಲ್ಲಿ ಪರಿಗಣನೆಯಲ್ಲಿರುವ ಮಸೂದೆಯು, ಶಾಲೆಗಳಲ್ಲಿ ಸ್ಮಾರ್ಟ್‌ಫೋನ್ ಬಳಕೆಯನ್ನು ನಿಯಂತ್ರಿಸುವ ಕುರಿತು ಇನ್ನಷ್ಟು ಸ್ಪಷ್ಟ ನಿಯಮಗಳನ್ನು ರೂಪಿಸಲು ಉದ್ದೇಶಿಸಿದೆ ಎಂದು ಜಿಇಎಮ್ ವರದಿ ತಿಳಿಸಿದೆ.
ಎಲ್ಲಾ ಸರ್ಕಾರಗಳು ಸಂಪೂರ್ಣ ನಿಷೇಧವನ್ನು ಆಯ್ಕೆ ಮಾಡುತ್ತಿಲ್ಲ. ಕೆಲವು ದೇಶಗಳು ಇತ್ತೀಚೆಗೆ ಶಾಲೆಗಳಲ್ಲಿ ಫೋನ್ ಬಳಕೆ ನಿಯಂತ್ರಿಸುವ ಬಗ್ಗೆ ನೀತಿ-ನಿಯಮಗಳನ್ನು ರೂಪಿಸಿಕೊಂಡಿವೆ. ಆದರೆ ದೇಶವ್ಯಾಪಿ ಕಠಿಣ ನಿಷೇಧವನ್ನು ಜಾರಿಗೆ ತಂದಿಲ್ಲ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.ಪೋಲೆಂಡ್
ಅನೇಕ ಸಂದರ್ಭಗಳಲ್ಲಿ, ಈ ನಿಷೇಧ ಶಾಲಾ ಅವಧಿಯಲ್ಲಿ ಅಥವಾ ತರಗತಿಗಳ ಒಳಗೆ ಮಾತ್ರ ಅನ್ವಯವಾಗುತ್ತದೆ. ಕೆಲವು ಶಿಕ್ಷಣ ಸಂಸ್ಥೆಗಳು ಮೊಬೈಲ್‌ಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗಾಗಿ, ವಿಶೇಷ ವಿದ್ಯಾರ್ಥಿಗಳ ಗುಂಪುಗಳಿಗೆ (ಉದಾಹರಣೆಗೆ ಅಂಗವೈಕಲ್ಯ ಅಥವಾ ಅನಾರೋಗ್ಯ ಹೊಂದಿರುವವರಿಗೆ) ಮಾತ್ರ ಬಳಸಲು ಅನುಮತಿಸುತ್ತಿವೆ. ಅಥವಾ ಸ್ವಿಚ್ ಆಫ್ ಮಾಡಿ ಇಡುವಂತೆ ಸೂಚಿಸುತ್ತಿವೆ.
ಕೊಮೊರೊಸ್, ಕೊಲಂಬಿಯಾ, ಎಸ್ಟೋನಿಯಾ, ಲಿಥುವೇನಿಯಾ, ಐಸ್‌ಲ್ಯಾಂಡ್, ಪೆರು, ಇಂಡೊನೇಷ್ಯಾ, ಸರ್ಬಿಯಾ, ಪೋಲೆಂಡ್ ಮತ್ತು ಫಿಲಿಪೈನ್ಸ್ ದೇಶಗಳು ಇಂತಹ ಕ್ರಮಗಳನ್ನು ಅನುಸರಿಸಿರುವ ದೇಶಗಳಾಗಿವೆ ಎಂದು ವರದಿ ತಿಳಿಸಿದೆ.
ಶಿಕ್ಷಣ ವ್ಯವಸ್ಥೆ ವಿಕೇಂದ್ರೀಕೃತವಾಗಿರುವ ದೇಶಗಳಲ್ಲಿ, ಸಾಮಾನ್ಯವಾಗಿ ಈ ನಿರ್ಬಂಧಗಳನ್ನು ಪ್ರಾದೇಶಿಕ ಅಥವಾ ಸ್ಥಳೀಯ ಮಟ್ಟದಲ್ಲಿ ಮೊದಲು ಜಾರಿಗೆ ತರಲಾಗುತ್ತದೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ದೇಶವ್ಯಾಪಿ ನಿಷೇಧವಿಲ್ಲದಿದ್ದರೂ, 39 ರಾಜ್ಯಗಳು ಶಾಲಾ ತರಗತಿಗಳಲ್ಲಿ ಫೋನ್ ಬಳಕೆಯನ್ನು ನಿಷೇಧಿಸುವ ಬಗ್ಗೆ ನೀತಿ- ನಿಯಮಗಳನ್ನು ಜಾರಿಗೆ ತಂದಿವೆ. ಇತರೆ ಬಹುತೇಕ ರಾಜ್ಯಗಳೂ ಫೋನ್ ಬಳಕೆಯನ್ನು ನಿಯಂತ್ರಿಸಲು ವಿಧೇಯಕಗಳನ್ನು ಮಂಡಿಸಿವೆ ಎಂದು ಹೇಳಿದೆ.
ಶೈಕ್ಷಣಿಕ ಯಶಸ್ಸಿಗೆ ಮಾನಸಿಕ ಆರೋಗ್ಯವು ನಿರ್ಣಾಯಕವಾಗಿದೆ. ಸಾಮಾಜಿಕ ಮಾಧ್ಯಮಗಳ ಪರಿಣಾಮವು ವಿಶೇಷವಾಗಿ ಬಾಲಕಿಯರ ಮೇಲೆ ಹೆಚ್ಚು ಪ್ರಭಾವಿತವಾಗಿದೆ.
ಹಾಗಾಗಿ ಕೆಲವು ದೇಶಗಳು ಮಕ್ಕಳಿಗಾಗಿ ಸಾಮಾಜಿಕ ಮಾಧ್ಯಮ ಬಳಕೆಗೆ ನಿರ್ಬಂಧಗಳನ್ನು ಜಾರಿಗೆ ತಂದಿವೆ. ಉದಾಹರಣೆಗೆ ಆಸ್ಟ್ರೇಲಿಯಾ, ಫ್ರಾನ್ಸ್, ಪೋರ್ಚುಗಲ್ ಮತ್ತು ಸ್ಪೇನ್‌ನಲ್ಲಿ ಕಾನೂನು ಕ್ರಮಗಳು(ಮಸೂದೆ) ಜಾರಿಯಲ್ಲು ವೆ. ಡೆನ್ಮಾರ್ಕ್, ಜೆಕ್ ಗಣರಾಜ್ಯ ಮತ್ತು ಇಂಡೊನೇಷ್ಯಾದಲ್ಲಿ ಈ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದೂ ವರದಿ ತಿಳಿಸಿದೆ.

