ಗ್ಯಾಂಗ್ಟಕ್: ಸಿಕ್ಕಿಂನ ಗ್ಯಾಂಗ್ಟಕ್ ಹಾಗೂ ಪಾಕ್ಯೋಂಗ್ ಜಿಲ್ಲೆಗಳ ಎತ್ತರದ ಪ್ರದೇಶಗಳಲ್ಲಿ ಹಿಮಪಾತವಾಗುವ ಸಾಧ್ಯತೆಗಳಿದ್ದು, ಈ ಕುರಿತಂತೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ ಎಂದು ಅಧಿಕಾರಿಗಳು ಶನಿವಾರ ಹೇಳಿದ್ದಾರೆ.
ಸಿಕ್ಕಿಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ನೀಡಿರುವ ಮುನ್ಸೂಚನೆಯ ಪ್ರಕಾರ, ಈ ಎರಡೂ ಜಿಲ್ಲೆಗಳಲ್ಲಿ ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಯಿಂದಾಗಿ 3500 ಮೀಟರ್‌ಗಿಂತ ಎತ್ತರದ ಪ್ರದೇಶಗಳಲ್ಲಿ ಮುಂದಿನ 24 ಗಂಟೆಯಲ್ಲಿ ಹಿಮಪಾತವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಹೀಗಾಗಿ ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತಿದ್ದು, ಎಚ್ಚರವಹಿಸುವಂತೆ ಜನರಿಗೆ ತಿಳಿಸಲಾಗಿದೆ.
ಹಿಮಾಲಯದ ತಪ್ಪಲಿನಲ್ಲಿರುವ ರಾಜ್ಯಗಳಲ್ಲಿ ಶುಕ್ರವಾರದಿಂದಲೂ ತೀವ್ರ ಮಳೆಯಾಗುತ್ತಿದ್ದು, ಗ್ಯಾಂಗ್ಟಕ್‌ನಿಂದ ತ್ಸೋಮ್ಗೊ ಸರೋವರ ಹಾಗೂ ನಾಥುಲಾಗೆ ತೆರಳುವ ರಸ್ತೆಯನ್ನೂ ಹಿಮವರ್ಷದಿಂದಾಗಿ ಮುಚ್ಚಲಾಗಿದೆ.

