ನವದೆಹಲಿ: ಜನರು ಮೊಬೈಲ್ ಫೋನ್‌ಗಳಲ್ಲಿ ಚಿತ್ರೀಕರಿಸಿದ ವಿಡಿಯೊಗಳನ್ನು ತಕ್ಷಣವೇ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡುವ ಪ್ರವೃತ್ತಿಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಇಂತಹ ಚಟುವಟಿಕೆಗಳಿಂದ ನ್ಯಾಯಯುತ ವಿಚಾರಣೆ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ ಎಂದು ಹೇಳಿದೆ.
ಭಾರತದ ಮುಖ್ಯನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯಾ ಬಾಗ್ಚಿ ಮತ್ತು ವಿಪುಲ್ ಎಂ ಪಂಚೋಲಿ ಅವರನ್ನೊಳಗೊಂಡ ಪೀಠ ಶುಕ್ರವಾರ ಈ ಹೇಳಿಕೆ ನೀಡಿದೆ.
'ಪೊಲೀಸರು ಸಾಮಾಜಿಕ ಮಾಧ್ಯಮಗಳಲ್ಲಿ ಆರೋಪಿಗಳ ವಿಡಿಯೊ ಮತ್ತು ಫೋಟೊಗಳನ್ನು ಅಪ್‌ಲೋಡ್ ಮಾಡುತ್ತಾ, ಜನರ ಮನಸ್ಸಿನಲ್ಲಿ ಪಕ್ಷಪಾತದ ಭಾವನೆಯನ್ನು ಸೃಷ್ಟಿಸುತ್ತಾರೆ' ಎಂದು ಆರೋಪಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸಿತು.
ಮತ್ತೊಂದು ಪ್ರಕರಣದಲ್ಲಿ, 'ಪೊಲೀಸರು ಮಾಧ್ಯದವರಿಗೆ ಮಾಹಿತಿ ನೀಡುವ ವಿಚಾರದಲ್ಲೂ ಮಾರ್ಗಸೂಚಿಗಳನ್ನು ರೂಪಿಸುವಂತೆ ನ್ಯಾಯಾಲಯವು ಈಗಾಗಲೇ ರಾಜ್ಯಗಳನ್ನು ಕೇಳಿದೆ. ಇದರಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚುವಂತಹ ಪೋಸ್ಟ್‌ಗಳೂ ಸೇರುತ್ತವೆ' ಎಂದು ಪಿಐಎಲ್ ವಾದಿಸಿದೆ.
ಈ ಮಾರ್ಗಸೂಚಿಗಳಿಂದ ಬದಲಾವಣೆ ಆಗಲಿರುವುದನ್ನು ನಿರೀಕ್ಷಿಸುವಂತೆ ಪೀಠ ಅರ್ಜಿದಾರ ಹೇಮೇಂದ್ರ ಪಟೇಲ್ ಅವರಿಗೆ ಹೇಳಿತು.
'ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಹೊಂದಿರುವ ಪ್ರತಿಯೊಬ್ಬರೂ ಮಾಧ್ಯಮವಾಗಿದ್ದಾರೆ' ಎಂಬ ಪಟೇಲ್ ಪರ ಹಾಜರಾಗಿದ್ದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರ ಮಾತನ್ನು ಪೀಠ ಸಮ್ಮತಿಸಿತು.

