ಡೆಹ್ರಾಡೂನ್: ಎರಡು ಗುಂಪುಗಳ ನಡುವಿನ ಘರ್ಷಣೆಯಲ್ಲಿ ಹಾರಿದ ಗುಂಡಿಗೆ ನಿವೃತ್ತ ಬ್ರಿಗೇಡಿಯರ್ ಒಬ್ಬರು ಸೋಮವಾರ ಮೃತಪಟ್ಟಿದ್ದಾರೆ. ನಿವೃತ್ತ ಬ್ರಿಗೇಡಿಯರ್ ಮುಖೇಶ್ ಜೋಶಿ (74) ಮೃತರು.
ದೆಹಲಿ ನೋಂದಾಯಿತ ಫಾರ್ಚೂನರ್ ಹಾಗೂ ಸ್ಕಾರ್ಪಿಯೊ ಕಾರುಗಳ ಪ್ರಯಾಣಿಕರ ನಡುವೆ ಶುರುವಾದ ವಾಗ್ವಾದವು ಮಸ್ಸೂರಿ ರಸ್ತೆಯ ಜೊಹ್ರಿ ಗ್ರಾಮದ ಬಳಿ ವಿಕೋಪಕ್ಕೆ ತಲುಪಿದ್ದು, ಈ ವೇಳೆ ದುರಂತ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಾಗ್ವಾದ ಹೆಚ್ಚಾದಂತೆ ಸ್ಕಾರ್ಪಿಯೊದಲ್ಲಿದ್ದ ಪ್ರಯಾಣಿಕರು ಫಾರ್ಚೂನರ್ ಅನ್ನು ಬೆನ್ನಟ್ಟಿದರು. ಈ ಸಂದರ್ಭ ಹಾರಿಸಿದ ಗುಂಡು ಜೋಶಿ ಅವರಿಗೆ ತಗುಲಿತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ನೀಡುತ್ತಿದ್ದಾಗಲೇ ಅವರು ಮೃತಪಟ್ಟರು ಎಂದು ಮಾಹಿತಿ ನೀಡಿದ್ದಾರೆ.
ಸ್ಕಾರ್ಪಿಯೊದಲ್ಲಿದ್ದವರು ಹಾರಿಸಿದ ಗುಂಡೊಂದು ಫಾರ್ಚೂನರ್ ಕಾರಿನ ಟೈರ್‌ಗೂ ತಗುಲಿದೆ. ಚಾಲಕನ ನಿಯಂತ್ರಣ ತಪ್ಪಿದ ಫಾರ್ಚೂನರ್ ಜೊಹ್ರಿಯ ಸರ್ಕಾರಿ ಪ್ರಾಥಮಿಕ ಶಾಲೆ ಬಳಿಯ ರಸ್ತೆ ಬದಿ ಮರವೊಂದಕ್ಕೆ ಡಿಕ್ಕಿ ಹೊಡೆದಿದೆ. ತಕ್ಷಣವೇ ಸ್ಕಾರ್ಪಿಯೊದಲ್ಲಿದ್ದವರು ಫಾರ್ಚೂನರ್ ಕಾರಿನಲ್ಲಿದ್ದ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದಿದ್ದಾರೆ.
ಸ್ಕಾರ್ಪಿಯೊದಲ್ಲಿ ಪಯಣಿಸುತ್ತಿದ್ದ ಎಲ್ಲ ಆರೋಪಿಗಳು ಸ್ಥಳದಿಂದ ಪರಾರಿ ಆಗಿದ್ದಾರೆ. ದುಷ್ಕೃತ್ಯದಲ್ಲಿ ಭಾಗಿಯಾದವರ ಬಂಧನಕ್ಕಾಗಿ ಜಿಲ್ಲೆಯಾದ್ಯಂತ ಕಣ್ಗಾವಲಿಡಲಾಗಿದೆ ಎಂದು ಡೆಹ್ರಾಡೂನ್ ಎಸ್‌ಪಿ ಪ್ರಮೋದ್ ಕುಮಾರ್ ತಿಳಿಸಿದ್ದಾರೆ.

