ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ವಿವಿಧ ದುರ್ಘಟನೆಗಳಲ್ಲಿ ಇದುವರೆಗೆ 8 ಮಂದಿ ಭಾರತೀಯರು ಮೃತಪಟ್ಟಿದ್ದು, ಒಬ್ಬರು ಕಣ್ಮರೆಯಾಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ಸೋಮವಾರ ತಿಳಿಸಿದೆ.
ಪಶ್ಚಿಮ ಏಷ್ಯಾದ ಪರಿಸ್ಥಿತಿ ಕುರಿತಂತೆ ಅಂತರ್‌ಸಚಿವಾಲಯದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಹೆಚ್ಚುವರಿ ಕಾರ್ಯದರ್ಶಿ (ಕೊಲ್ಲಿ ರಾಷ್ಟ್ರ) ಅಸೀಮ್ ಆರ್. ಮಹಾಜನ್, 'ಕುವೈತ್‌ನ ವಿದ್ಯುತ್ ಘಟಕದ ಮೇಲೆ ಭಾನುವಾರ ರಾತ್ರಿ ನಡೆದ ದಾಳಿಯಲ್ಲಿ ಭಾರತೀಯರೊಬ್ಬರನ್ನು ಕಳೆದುಕೊಂಡಿದ್ದೇವೆ' ಎಂದು ತಿಳಿಸಿದ್ದಾರೆ. ಆದರೆ, ಸಾವಿನ ಸಂದರ್ಭಗಳ ಕುರಿತಂತೆ ಹೆಚ್ಚಿನ ವಿವರ ನೀಡಲಿಲ್ಲ.
'ದುರಂತದಲ್ಲಿ ಮೃತಪಟ್ಟ ಕುಟುಂಬಕ್ಕೆ ತೀವ್ರ ಸಂತಾಪ ಸಲ್ಲಿಸುತ್ತೇವೆ. ಕುವೈತ್‌ನ ರಾಯಭಾರ ಕಚೇರಿಯ ಸಿಬ್ಬಂದಿ ಮೃತರ ಕುಟುಂಬಸ್ಥರ ಜೊತೆಗೆ ನಿಕಟ ಸಂಪರ್ಕದಲ್ಲಿದ್ದು, ಮೃತದೇಹವನ್ನು ಆದಷ್ಟು ಬೇಗ ಭಾರತಕ್ಕೆ ತರಲು ಎಲ್ಲ ರೀತಿಯ ನೆರವು ನೀಡಲಾಗುವುದು' ಎಂದು ತಿಳಿಸಿದ್ದಾರೆ.
5.5 ಲಕ್ಷ ಭಾರತೀಯರು ಸ್ವದೇಶಕ್ಕೆ: ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಸಂಘರ್ಷದ ಬಳಿಕ 5.5 ಲಕ್ಷ ಭಾರತೀಯರು ಸ್ವದೇಶಕ್ಕೆ ಹಿಂತಿರುಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯವು ತಿಳಿಸಿದೆ.
'ಕೊಲ್ಲಿ ರಾಷ್ಟ್ರ ಹಾಗೂ ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತಂತೆ ವಿದೇಶಾಂಗ ಇಲಾಖೆ ಸೂಕ್ಷ್ಮ ನಿಗಾ ವಹಿಸಿದೆ. ಮಾತುಕತೆ ಹಾಗೂ ರಾಜತಾಂತ್ರಿಕ ಮಾರ್ಗದ ಮೂಲಕ ಸಂಘರ್ಷ ಕೊನೆಗೊಳಿಸಲು ನಿರಂತರ ಪ್ರಯತ್ನ ನಡೆಸಲಾಗುವುದು' ಎಂದು ವಿದೇಶಾಂಗ ಇಲಾಖೆಯ ವಕ್ತಾರ ರಣದೀರ್ ಜೈಸ್ವಾಲ್ ತಿಳಿಸಿದ್ದಾರೆ.
ಪ್ರಧಾನಿ ಮಾತುಕತೆ: 'ಮಾರ್ಚ್ 28ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸೌದಿ ಅರೇಬಿಯಾದ ಪ್ರಧಾನಿ ಮೊಹಮ್ಮದ್ ಬಿನ್ ಸಲ್ಮಾನ್ ಜೊತೆಗೆ ಸಂಘರ್ಷದ ಕುರಿತಂತೆ ಮಾತುಕತೆ ನಡೆಸಿ, ಜಲಮಾರ್ಗಗಳ ಮುಕ್ತ ಸಂಚಾರದ ಅಗತ್ಯತೆ ಕುರಿತು ಪ್ರತಿಪಾದಿಸಿದರು ಎಂದು ಜೈಸ್ವಾಲ್ ಹೇಳಿದ್ದಾರೆ.
ದೂರವಾಣಿ ಮಾತುಕತೆಯಲ್ಲಿ ಪ್ರಾದೇಶಿಕ ಇಂಧನ ಮೂಲಸೌಕರ್ಯ ಕೇಂದ್ರಗಳ ಮೇಲಿನ ದಾಳಿಯನ್ನು ಪ್ರಧಾನಿ ಮೋದಿ ಬಲವಾಗಿ ಖಂಡಿಸಿದ್ದಾರೆ.
ಸಹಾಯವಾಣಿ ಸಕ್ರಿಯ: 'ಕೊಲ್ಲಿ ರಾಷ್ಟ್ರಗಳಲ್ಲಿ ಸಿಲುಕಿರುವ ಭಾರತೀಯರಿಗೆ ನೆರವಾಗಲು ತೆರೆದಿರುವ ವಿಶೇಷ ಸಹಾಯವಾಣಿ ಕೇಂದ್ರಗಳು ಈಗಲೂ ಸಕ್ರಿಯವಾವಾಗಿವೆ. ಅಲ್ಲಿನ ರಾಯಭಾರ ಕಚೇರಿಗಳು, ಸಹಾಯವಾಣಿ ಕೇಂದ್ರಗಳು 24*7 ಕಾರ್ಯನಿರ್ವಹಿಸುತ್ತಿವೆ. ಅಲ್ಲಿರುವ ಎಲ್ಲ ಭಾರತೀಯ ಕಂಪನಿ, ಭಾರತೀಯ ಸಮುದಾಯ ಹಾಗೂ ಸಂಘಟನೆಗಳಿಗೆ ನಿರಂತರ ಸಲಹೆಗಳನ್ನು ನೀಡಲಾಗುತ್ತಿದೆ' ಎಂದು ಹೆಚ್ಚುವರಿ ಕಾರ್ಯದರ್ಶಿ (ಕೊಲ್ಲಿ ರಾಷ್ಟ್ರಗಳು) ಅಸೀಮ್ ಆರ್. ಮಹಾಜನ್ ತಿಳಿಸಿದ್ದಾರೆ.
85 ವಿಮಾನಗಳ ಹಾರಾಟ: 'ಯುಎಇ ಹಾಗೂ ಭಾರತದ ನಡುವೆ ನಿರ್ದಿಷ್ಟ ವೇಳಾಪಟ್ಟಿ ಇಲ್ಲದ ವಿಮಾನಗಳು ಹಾರಾಟ ನಡೆಸುತ್ತಿದ್ದು, ಮಂಗಳವಾರದಿಂದ 85 ವಿಮಾನಗಳು ಹಾರಾಟ ನಡೆಸುವ ನಿರೀಕ್ಷೆಯಿದೆ' ಎಂದು ಮಹಾಜನ್ ತಿಳಿಸಿದ್ದಾರೆ.
'ಸೌದಿ ಅರೇಬಿಯಾ ಹಾಗೂ ಒಮಾನ್‌ನ ವಿವಿಧ ವಿಮಾನ ನಿಲ್ದಾಣಗಳಿಂದ ವಿಮಾನಗಳು ಹಾರಾಟ ನಡೆಸುತ್ತಿವೆ. ಕತಾರ್‌ನ ವಾಯುಪ್ರದೇಶವು ಭಾಗಶಃ ತೆರೆದಿದ್ದು, ಮಾರ್ಚ್ 30ರಿಂದ 10 ವಿಮಾನಗಳು ಹಾರಾಟ ನಡೆಸುವ ಸಾಧ್ಯತೆಯಿದೆ' ಎಂದು ಹೇಳಿದ್ದಾರೆ.
'ಕುವೈತ್-ಬಹರೇನ್‌ನ ವಾಯುಪ್ರದೇಶ ಈಗಲೂ ಮುಚ್ಚಿದೆ. ಸೌದಿ ಅರೇಬಿಯಾದ ವಿವಿಧ ವಿಮಾನ ನಿಲ್ದಾಣಗಳಿಂದ ಜಜೀರಾ ಏರ್‌ವೇಸ್‌ನ ವಿಮಾನಗಳು ಭಾರತದ ವಿವಿಧ ನಗರಗಳಿಗೆ ನಿಗದಿತವಲ್ಲದ ವಿಮಾನಗಳ ಹಾರಾಟವನ್ನು ಆರಂಭಿಸಿವೆ' ಎಂದು ಎಂಇಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ವಿಮಾನಗಳ ಹಾರಾಟ ನಿರ್ಬಂಧ ಹಾಗೂ ವಾಯುಪ್ರದೇಶ ಮುಚ್ಚಿದ್ದರಿಂದ ಇರಾನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಅರ್ಮೇನಿಯಾ, ಅಜರ್‌ಬೈಜಾನ್ ಮೂಲಕ, ಇಸ್ರೇಲ್‌ನಲ್ಲಿ ಸಿಲುಕಿರುವವರನ್ನು ಈಜಿಪ್ಟ್, ಜೋರ್ಡನ್ ಮೂಲಕ ವ್ಯವಸ್ಥೆ ಮಾಡಲಾಗಿದೆ. ಇರಾಕ್‌ನಿಂದ ಜೋರ್ಡನ್, ಸೌದಿ ಅರೇಬಿಯಾ ಹಾಗೂ ಕುವೈತ್, ಬಹರೇನ್‌ನಲ್ಲಿರುವವರನ್ನು ಸೌದಿ ಅರೇಬಿಯಾದ ಮೂಲಕ ಕರೆತರಲು ವ್ಯವಸ್ಥೆ ಮಾಡಲಾಗಿದೆ' ಎಂದು ಮಾಹಿತಿ ನೀಡಿದ್ದಾರೆ.

