ನವದೆಹಲಿ: ಸಂಸತ್ ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ33ರಷ್ಟು ಮೀಸಲಾತಿ ನೀಡುವ ಕಾಯ್ದೆ ಅನುಷ್ಠಾನದ ವಿಚಾರವಾಗಿ ಕೇಂದ್ರ ಸರ್ಕಾರ ಹಾಗೂ ಕಾಂಗ್ರೆಸ್ ಸೇರಿ ವಿಪಕ್ಷಗಳ ಮಧ್ಯೆ ಹಗ್ಗಜಗ್ಗಾಟ ಆರಂಭವಾಗಿದೆ.
ಈ ಕಾಯ್ದೆ ಅನುಷ್ಠಾನ ಕುರಿತು ಚರ್ಚಿಸಲು ಶೀಘ್ರವೇ ಸರ್ವಪಕ್ಷ ಸಭೆ ನಡೆಸಲು ಕೇಂದ್ರ ಇಚ್ಛಿಸಿದೆ.
ಏಪ್ರಿಲ್ 29ರ ನಂತರ ಸರ್ವಪಕ್ಷ ಸಭೆ ಕರೆಯುವುದು ಸಮಂಜಸವಾಗದು. ಇದರಿಂದ ಕಾಯ್ದೆ ಅನುಷ್ಠಾನ ಮತ್ತಷ್ಟು ವಿಳಂಬವಾಗಲಿದೆ ಎಂಬುದು ಕೇಂದ್ರ ಸರ್ಕಾರದ ವಾದ.
'ಕೇಂದ್ರ ಸರ್ಕಾರದ ಈ ವಾದದಲ್ಲಿ ಹುರುಳಿಲ್ಲ. 2029ರಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ ಅನ್ವಯವಾಗುವಂತೆ ಮಹಿಳಾ ಮೀಸಲಾತಿ ಕಾಯ್ದೆ ಜಾರಿಗೊಳಿಸಬಹುದು. ಇದಕ್ಕೆ ಸಾಕಷ್ಟು ಸಮಯವೂ ಇದೆ' ಎನ್ನುವ ಮೂಲಕ ಕೇಂದ್ರದ ಉತ್ಸಾಹಕ್ಕೆ ಕಾಂಗ್ರೆಸ್ ತಣ್ಣೀರೆರೆಚಿದೆ.
ಮಹಿಳಾ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತಂದು, ನೂತನ ಕಾಯ್ದೆಯನ್ನು ತ್ವರಿತವಾಗಿ ಜಾರಿಗೊಳಿಸುವುದು ಕೇಂದ್ರ ಸರ್ಕಾರದ ಆದ್ಯತೆಯಾಗಿದೆ. ಈ ಕುರಿತು ಚರ್ಚಿಸಲು ಸರ್ವಪಕ್ಷ ಸಭೆ ಆಯೋಜಿಸುವ ಸಂಬಂಧ ಸಂಸದೀಯ ಸಚಿವ ಕಿರಣ್ ರಿಜಿಜು ಅವರು ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ ಎಂದು ಮೂಲಗಳು ಹೇಳಿವೆ.
ಇದಕ್ಕೆ ಪ್ರತಿಯಾಗಿ ರಿಜಿಜು ಅವರಿಗೆ ಪತ್ರ ರವಾನಿಸಿರುವ ಖರ್ಗೆ,'ಮಹಿಳಾ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತರುವುದಕ್ಕೆ ಸರ್ಕಾರ ಯಾಕಿಷ್ಟು ಅವಸರ ಮಾಡುತ್ತಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ' ಎಂದು ಪ್ರಶ್ನಿಸಿದ್ದಾರೆ.
'ಐದು ರಾಜ್ಯಗಳ ವಿಧಾನಸಭೆಗಳಿಗೆ ಏಪ್ರಿಲ್‌ನಲ್ಲಿ ಚುನಾವಣೆ ನಡೆಯಲಿದ್ದು, ನಾವು ಪ್ರಚಾರ ಕಾರ್ಯದಲ್ಲಿ ತೊಡಗಿದ್ದೇವೆ. ಈ ಕಾರಣಕ್ಕೆ, ಚುನಾವಣೆ ಮುಗಿದ ಬಳಿಕವೇ ಈ ವಿಚಾರ ಕುರಿತು ಸರ್ವಪಕ್ಷ ಕರೆಯಬೇಕು. ಹೀಗೆ ಮಾಡುವುದರಿಂದ, ಮಹಿಳಾ ಮೀಸಲಾತಿ ಕಾಯ್ದೆಗೆ (ನಾರಿ ಶಕ್ತಿ ವಂದನ ಅಧಿನಿಯಮ, 2023) ತಿದ್ದುಪಡಿ ತಂದು ಜಾರಿಗೊಳಿಸುವುದರ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ' ಎಂಬುದಾಗಿ ಖರ್ಗೆ ಅವರು ರಿಜಿಜು ಅವರಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.
ಕೆಲ ಪಕ್ಷಗಳಿಂದ ಮಾತುಕತೆ: ಕಾಯ್ದೆಗೆ ತಿದ್ದುಪಡಿ ತರುವ ವಿಚಾರವಾಗಿ ಎಲ್ಲ ಪಕ್ಷಗಳ ನಡುವೆ ಒಮ್ಮತ ಮೂಡಿಸಲು ಕೇಂದ್ರ ಸರ್ಕಾರ ಪ್ರಯತ್ನಗಳನ್ನು ಮಾಡುತ್ತಲೇ ಇದೆ.
ಕಾಂಗ್ರೆಸ್, ಟಿಎಂಸಿ ಹಾಗೂ ಸಿಪಿಎಂ ನಾಯಕರು ಸರ್ಕಾರದ ಪ್ರತಿನಿಧಿಗಳನ್ನು ಭೇಟಿ ಮಾಡಿ, ಈ ವಿಚಾರ ಕುರಿತು ಚರ್ಚಿಸಲು ನಿರಾಕರಿಸಿದ್ದಾರೆ. ಮತ್ತೊಂದೆಡೆ, ಸಮಾಜವಾದಿ ಪಕ್ಷ, ಡಿಎಂಕೆ, ಬಿಜೆಡಿ, ವೈಎಸ್‌ಆರ್ ಕಾಂಗ್ರೆಸ್, ಎಐಎಂಐಎಂ, ಶಿವಸೇನಾ(ಯುಬಿಟಿ) ಹಾಗೂ ಎನ್‌ಸಿಪಿ(ಶರದ್‌ಪವಾರ್) ಪಕ್ಷಗಳ ಮುಖಂಡರು ಸರ್ಕಾರದ ಪ್ರತಿನಿಧಿಗಳನ್ನು ಭೇಟಿ ಮಾಡಿ, ಚರ್ಚಿಸಿದ್ದಾರೆ.

