ತ್ರಿಶ್ಯೂರ್ : ಕೇರಳದ ಗುರುವಾಯೂರು ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ನೀಡಿರುವ ಹೇಳಿಕೆ ಕೋಮುದ್ವೇಷವನ್ನು ಬಿತ್ತುತ್ತದೆ ಎಂದು ಆಕ್ಷೇಪಿಸಿ ಕಾಂಗ್ರೆಸ್ ಬೆಂಬಲಿತ ವಿದ್ಯಾರ್ಥಿ ಸಂಘಟನೆ ಕೆಎಸ್‌ಯು ಕೇರಳ ಹೈಕೋರ್ಟ್ ಮೆಟ್ಟಿಲೇರಿದೆ.
ಬಿಜೆಪಿ ನಾಯಕ ಬಿ. ಗೋಪಾಲಕೃಷ್ಣನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮತ್ತು ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸುವಂತೆ ಕೆಎಸ್‌ಯು ಮನವಿ ಮಾಡಿದೆ. ಪೊಲೀಸರು ಮತ್ತು ಅಧಿಕಾರಿಗಳಿಗೂ ಕೆಎಸ್‌ಯು ದೂರು ನೀಡಿದೆ.
'ಗುರುವಾಯೂರು ವಿಧಾನಸಭಾ ಕ್ಷೇತ್ರದಲ್ಲಿ ಐದು ದಶಕಗಳಿಂದ ಹಿಂದೂಗಳು ಶಾಸಕರಾಗಿ ಆಯ್ಕೆಯಾಗಿಲ್ಲ. ಎಡಪಕ್ಷ ಮತ್ತು ಕಾಂಗ್ರೆಸ್ ನೇತೃತ್ವದ ಕೂಟಗಳು ಹಿಂದೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ಗುರುವಾಯೂರಪ್ಪನ್ ದೇವರ ಭೂಮಿಯು ದೇಗುಲ ಕಳ್ಳರ ಕೈಯಲ್ಲಿದೆ' ಎಂದು ಚುನಾವಣಾ ಪ್ರಚಾರದಲ್ಲಿ ಗೋಪಾಲಕೃಷ್ಣನ್ ಹೇಳಿರುವ ವಿಡಿಯೊವನ್ನು ಕೆಎಸ್‌ಯು ಸಾಕ್ಷ್ಯವಾಗಿ ನೀಡಿದೆ.



