ಮುಂಬೈ: ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಲೋಕದ ಪಾತಕಿ ರವಿ ಪೂಜಾರಿಯನ್ನು ಮಹಾರಾಷ್ಟ್ರದ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಸುಳ್ಯ ರವಿಪ್ರಕಾಶ್ ಪೂಜಾರಿಯನ್ನು (57) ತಮ್ಮ ಕಸ್ಟಡಿಗೆ ಪಡೆದ ಠಾಣೆ ಪೊಲೀಸರು ಮುಂಬೈಗೆ ಕರೆದೊಯ್ದರು.
ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಎಂಸಿಒಸಿಎ) ಅಡಿ ಸ್ಥಾಪಿಸಲಾದ ನ್ಯಾಯಾಲಯಕ್ಕೆ ಬಿಗಿಭದ್ರತೆಯಲ್ಲಿ ಆತನನ್ನು ಬುಧವಾರ ಹಾಜರುಪಡಿಸಿದರು.
ವಿಶೇಷ ಎಂಸಿಒಸಿಎ ನ್ಯಾಯಾಲಯವು ಪೂಜಾರಿಯನ್ನು ಮಾರ್ಚ್ 27ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ ಎಂದು ಠಾಣೆ ಪೊಲೀಸ್ ಸುಲಿಗೆ ವಿರೋಧಿ ಸೆಲ್ ಮುಖ್ಯಸ್ಥ, ಎಸಿಪಿ ವಿನಯ್ ಘೋರ್ಪಡೆ ತಿಳಿಸಿದ್ದಾರೆ.
ದಾವೂದ್ ಇಬ್ರಾಹಿಂ ಹಾಗೂ ಛೋಟಾ ರಾಜನ್ ಗ್ಯಾಂಗ್‌ನೊಂದಿಗೆ ನಂಟು ಹೊಂದಿದ್ದ ಪೂಜಾರಿ, ನಂತರ ತಮ್ಮದೇ ಸಿಂಡಿಕೇಟ್ ಮಾಡಿಕೊಂಡಿದ್ದರು. ದೇಶದಾದ್ಯಂತ 200ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾದ ಪ್ರಮುಖ ಆರೋಪಿ ಆಗಿದ್ದಾರೆ.

