ನವದೆಹಲಿ: ಎದೆಗೆ ಗುಂಡು ಹಾರಿಸಿಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪೂರ್ವ ದೆಹಲಿಯ ದಲ್ಲೂಪುರದಲ್ಲಿ ನಡೆದಿದೆ.
ಪಿಸ್ತೂಲ್‌ಗೆ ಗುಂಡು ತುಂಬಿಸುತ್ತಾ ಅದನ್ನು ವಿಡಿಯೊ ಮಾಡುವಂತೆ ಸೋದರ ಸಂಬಂಧಿಗೆ ಹೇಳಿದ್ದ ಪವನ್, ಬಳಿಕ ಎದೆಗೆ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾರೆ.
'ಪವನ್ ಗುಂಡು ಹಾರಿಸಿಕೊಂಡಿರುವ ದೃಶ್ಯಗಳನ್ನು ಅವರ ಸೋದರ ಸಂಬಂಧಿ ಹಿಮಾಂಶು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಪವನ್ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶ ಹೊಂದಿದ್ದ ಬಗ್ಗೆ ಹಿಮಾಂಶುಗೆ ಗೊತ್ತಿರಲಿಲ್ಲ' ಎಂದು ಪೊಲೀಸರು ತಿಳಿಸಿದ್ದಾರೆ.
ಪವನ್ ಪಿಸ್ತೂಲಿಗೆ ಗುಂಡು ತುಂಬಿಸುತ್ತಿದ್ದ ವೇಳೆ ಎಚ್ಚರಿಕೆಯಿಂದ ಇರುವಂತೆ ಹಿಮಾಂಶು ಸಲಹೆ ನೀಡಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಪವನ್ ಪಿಸ್ತೂಲನ್ನು ತನ್ನ ಎಡಭಾಗದ ಎದೆ ಮೇಲಿಟ್ಟುಕೊಂಡು, ಕ್ಯಾಮೆರಾ ಕಡೆ ನೋಡುತ್ತಾ ಗುಂಡು ಹಾರಿಸಿಕೊಂಡಿದ್ದಾರೆ. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಹಿಮಾಂಶು ಅವರಿಗೆ ಪಿಸ್ತೂಲ್ ಸೇರಿದ್ದು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

