ಮುಂಬೈ: ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಶಮನಗೊಳಿಸಿ, ಶಾಂತಿ ಸ್ಥಾಪನೆಯ ನಿಟ್ಟಿನಲ್ಲಿ ಭಾರತ ಮಧ್ಯಸ್ಥಿಕೆ ಪ್ರಯತ್ನಗಳನ್ನು ನಡೆಸದಿರುವ ಬಗ್ಗೆ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಸಂಸದ ಶಶಿ ತರೂರ್ ಬೇಸರ ವ್ಯಕ್ಪಡಿಸಿದ್ದಾರೆ. ಪಾಕಿಸ್ತಾನ ಈ ಹಿನ್ನೆಲೆಯಲ್ಲಿ ಮುಂದುವರಿದಿರುವುದು ಹತಾಶೆಯಾಗಿದೆ ಎಂದಿದ್ದಾರೆ.
ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧ ನಿಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಲು ಮುಂದಾಗದಿರುವ ಬಗ್ಗೆ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸುತ್ತಿವೆ.
ಫೆಬ್ರುವರಿ 28ರಂದು ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ ಆರಂಭಿಸಿದ ಬಳಿಕ ಪಶ್ಚಿಮ ಏಷ್ಯಾ ಉದ್ವಿಗ್ನಗೊಂಡಿದೆ. ಬಳಿಕ, ಪ್ರತಿದಾಳಿಗಳನ್ನು ನಡೆಸಿರುವ ಇರಾನ್, ಹೊರ್ಮುಜ್ ಜಲಸಂಧಿ ಮುಚ್ಚಿರುವುದು ಜಾಗತಿಕ ತೈಲ ಬಿಕ್ಕಟ್ಟನ್ನು ಸೃಷ್ಟಿಸಿದೆ.
'ನಮಗೆಲ್ಲರಿಗೂ ಸ್ವಲ್ಪ ಮುಜುಗರದ ಸಂಗತಿ'
ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ತರೂರ್, ಪ್ರಸ್ತುತ ಪರಿಸ್ಥಿತಿ ಭಾರತಕ್ಕೆ ಮುಜುಗರದ ಸಂಗತಿಯಾಗಿದೆ. ಕೇಂದ್ರವು ಶಾಂತಿ ಮಧ್ಯಸ್ಥಿಕೆ ವಹಿಸಲು ಈ ಅವಕಾಶವನ್ನು ಬಳಸಿಕೊಳ್ಳುತ್ತದೆ ಎಂದು ನಾನು ಆಶಿಸಿದ್ದೆ' ಎಂದಿದ್ದಾರೆ.
'ಈಗ, ನಡೆಯುತ್ತಿರುವ ಸಂಗತಿಗಳು ಅಷ್ಟು ಉತ್ತಮವಾಗಿಲ್ಲ ಎಂದು ಹೇಳಲು ವಿಷಾದಿಸುತ್ತೇನೆ. ಇದು ನಮಗೆಲ್ಲರಿಗೂ ಸ್ವಲ್ಪ ಮುಜುಗರದ ಸಂಗತಿ. ಇರಾನ್ ಯುದ್ಧದ ಬಗ್ಗೆ ಸರ್ಕಾರದ ಸಂಯಮ ಮತ್ತು ಮೌನವನ್ನು ನಾನು ಬೆಂಬಲಿಸಿದ್ದೆ. ಏಕೆಂದರೆ, ಸರ್ಕಾರವು ಶಾಂತಿ ಸ್ಥಾಪನೆಗೆ ಒಂದು ಅವಕಾಶವಾಗಿ ಅದನ್ನು ಬಳಸುತ್ತದೆ ಎಂದು ನಾನು ಆಶಿಸಿದ್ದೆ, ಭಾರತ ಶಾಂತಿ ಮಾತುಕತೆಯನ್ನು ಬೆಂಬಲಿಸುತ್ತದೆ ಎಂದು ಪ್ರಧಾನಿ ಮೋದಿ ಆಗಾಗ್ಗೆ ಹೇಳುತ್ತಿದ್ದರು' ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನವು ಈಗ ಟರ್ಕಿ ಮತ್ತು ಈಜಿಪ್ಟ್‌ನೊಂದಿಗೆ ಮಧ್ಯಸ್ಥಿಕೆ ಪ್ರಯತ್ನವನ್ನು ಮುನ್ನಡೆಸುತ್ತಿದೆ ಎಂದು ಹೇಳಿದ ತರೂರ್, ನಾನು ಆ ಬಗ್ಗೆ ಸಂತೋಷಪಡಲು ಸಾಧ್ಯವಿಲ್ಲ ಎಂದಿದ್ದಾರೆ.
ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಪ್ರತ್ಯೇಕ ಹೇಳಿಕೆಯಲ್ಲಿ ಶಶಿ ತರೂರ್, ಪಾಕಿಸ್ತಾನದಲ್ಲಿ ಶಾಂತಿ ಮಾತುಕತೆ ನಡೆಯುತ್ತಿದೆಯೇ ಎಂಬುದರಲ್ಲಿ ಭಾರತಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಭಾರತವು ಮಧ್ಯಸ್ಥಿಕೆಗೆ ಮುಂದಾಗಬೇಕೆಂದು ಮೂರು ವಾರಗಳಿಂದ ನಾನು ಒತ್ತಾಯಿಸುತ್ತಿದ್ದೇನೆ. ಅಮೆರಿಕ ಮತ್ತು ಇರಾನ್ ಜೊತೆಗಿನ ತನ್ನ ಉತ್ತಮ ಸಂಬಂಧಗಳನ್ನು ಶಾಂತಿ ಸ್ಥಾಪನೆಗೆ ಬಳಸಿಕೊಳ್ಳಬೇಕಿತ್ತು ಎಂದಿದ್ಧಾರೆ.

