ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ರಾಜತಾಂತ್ರಿಕ ವೈಫಲ್ಯಗಳಿಂದಾಗಿ ಅಸ್ಥಿರ ದೇಶವೊಂದು ಈಗ ಮಧ್ಯವರ್ತಿ ದೇಶವಾಗಲು ಸಜ್ಜಾಗಿದೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಟೀಕಿಸಿದ್ದಾರೆ.
'ಪಾಕಿಸ್ತಾನದಂತೆ ನಮ್ಮದು ದಲ್ಲಾಳಿ ದೇಶವಲ್ಲ' ಎಂಬ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, 'ಪಶ್ಚಿಮ ಏಷ್ಯಾ ಯುದ್ಧವನ್ನು ಕೊನೆಗೊಳಿಸಲು ಪಾಕಿಸ್ತಾನವು ಸಂಧಾನಕಾರನಾಗಿ ಹೊರಹೊಮ್ಮಿರುವುದು ಭಾರತದ ಪ್ರಾದೇಶಿಕ ರಾಜತಾಂತ್ರಿಕತೆಗೆ ಹಿನ್ನಡೆಯಾಗಿದೆ.
ಜೈಶಂಕರ್ ಅವರು ಭಾರತಕ್ಕೆ ಉಂಟಾಗಿರುವ ಈ ತೀವ್ರ ಮುಜುಗರವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ' ಎಂದು ಆರೋಪಿಸಿದ್ದಾರೆ.
'ಪ್ರಧಾನಿ ನರೇಂದ್ರ ಮೋದಿ ಅವರ ರಾಜತಾಂತ್ರಿಕತೆಯು ಕೇವಲ ಆಡಂಬರದಿಂದ ಕೂಡಿದ್ದು, ವಾಸ್ತವದಲ್ಲಿ ಹೇಡಿತನದಿಂದ ಕೂಡಿದೆ ಎಂಬುದಕ್ಕೆ ಪಾಕಿಸ್ತಾನವು ಮಧ್ಯವರ್ತಿ ಪಾತ್ರವನ್ನು ಪಡೆಯುತ್ತಿರುವುದೇ ಸಾಕ್ಷಿ' ಎಂದು ಹೇಳಿದ್ದಾರೆ.
'ಏನೇ ಇರಲಿ, ನಮ್ಮ ರಾಜತಾಂತ್ರಿಕತೆ ವೈಫಲ್ಯಗಳು ಅಸ್ಥಿರವಾಗಿದ್ದ ದೇಶವನ್ನು ಮಧ್ಯವರ್ತಿ ದೇಶವನ್ನಾಗಿ ಮಾಡಿದೆ ಎಂಬುದು ವಾಸ್ತವ. ಇದು ಸ್ವಯಂ ಘೋಷಿತ ವಿಶ್ವಗುರುಗಳ ವಿಶಿಷ್ಟ ಕೊಡುಗೆಯಾಗಿದೆ. ವಿದೇಶಾಂಗ ಸಚಿವರ ಯಾವುದೇ ಪಟಾಕಿ ಮಾತುಗಳು ಇದನ್ನು ಅಳಿಸಲು ಸಾಧ್ಯವಿಲ್ಲ' ಎಂದಿದ್ದಾರೆ.
ಪಾಕಿಸ್ತಾನಕ್ಕೆ ಯೋಗ್ಯತೆ ಇಲ್ಲ:
'ಸಂಧಾನಕ್ಕೆ ಪಾಕಿಸ್ತಾನ ಯೋಗ್ಯವೆಂದು ಪರಿಗಣಿಸುತ್ತಿರುವುದು ನಿಜಕ್ಕೂ ಅತಿರೇಕದ ಸಂಗತಿ. ಈ ದೇಶವು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಭಾರತ ಮತ್ತು ಇತರ ದೇಶಗಳಲ್ಲಿ ಭಯೋತ್ಪಾದನೆಯನ್ನು ಪ್ರಾಯೋಜಿಸಿದೆ. ಒಸಾಮಾ ಬಿನ್ ಲಾಡೆನ್‌ನಂತಹ ಅನೇಕ ಕ್ರೂರ ಭಯೋತ್ಪಾದಕರಿಗೆ ದಶಕಗಳ ಕಾಲ ಆಶ್ರಯ ನೀಡಿದೆ. ಇತರ ದೇಶಗಳು ಪರಮಾಣು ಶಕ್ತಿ ಪಡೆಯಲು ಸಹಾಯ ಮಾಡುವ ಮೂಲಕ ಪರಮಾಣು ಪ್ರಸರಣ ರಹಿತ ಕಾನೂನುಗಳನ್ನು ಘೋರವಾಗಿ ಉಲ್ಲಂಘಿಸಿದೆ' ಎಂದು ರಮೇಶ್ ಟೀಕಿಸಿದ್ದಾರೆ.
ಪಾಕಿಸ್ತಾನಕ್ಕೆ ಮತ್ತಷ್ಟು ಬಲ:
ಮುಂಬೈನಲ್ಲಿ ಭಯೋತ್ಪಾದನಾ ದಾಳಿ ನಡೆದಾಗ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸರ್ಕಾರವು ಪಾಕಿಸ್ತಾನದ ದುಷ್ಕೃತ್ಯಗಳನ್ನು ಜಗತ್ತಿಗೆ ಮನವರಿಕೆ ಮಾಡಿಕೊಡುವ ಮೂಲಕ ಆ ದೇಶವನ್ನು ಜಾಗತಿಕವಾಗಿ ಒಂಟಿಯಾಗಿಸಿತ್ತು. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದನಾ ದಾಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಒಂಟಿಯಾಗಿಸಲು ನಮಗೆ ಸಾಧ್ಯವಾಗಿಲ್ಲ. ಬದಲಾಗಿ ಪಾಕ್ ಸೇನಾ ಮುಖ್ಯಸ್ಥ ಅಸಿಂ ಮುನೀರ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೆಚ್ಚಿನ ವ್ಯಕ್ತಿಯಾದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಆಗ ಭಾರತ 'ಬ್ರೋಕರ್' ಆಗಿತ್ತೆ?:
ಜೈಶಂಕರ್ ಅವರ 'ದಲ್ಲಾಳಿ ದೇಶ' ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ, 'ರಷ್ಯಾ ಮತ್ತು ಉಕ್ರೇನ್ ನಡುವೆ ಮಧ್ಯಸ್ಥಿಕೆ ವಹಿಸಲು ಮೋದಿ ಅವರು ಹಪಹಪಿಸುತ್ತಿದ್ದಾಗ ಭಾರತವು 'ಬ್ರೋಕರ್ ದೇಶ' ಆಗಿತ್ತೇ?' ಎಂದು ಪ್ರಶ್ನಿಸಿದ್ದಾರೆ.
'ಇದು ಆಯ್ದ ಮಧ್ಯಸ್ಥಿಕೆಯೇ ಅಥವಾ ಆಯ್ದ ನೆನಪಿನ ಶಕ್ತಿಯೇ?' ಎಂದು ವ್ಯಂಗ್ಯವಾಡಿದ್ದಾರೆ.
ಯುದ್ಧ ಕೊನೆಗೊಳಿಸಲು ಭಾರತ ಯತ್ನ:
ಪಶ್ಚಿಮ ಏಷ್ಯಾದಲ್ಲಿ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವು ಎಲ್ಲರಿಗೂ ಹಾನಿ ಉಂಟುಮಾಡುತ್ತಿರುವುದರಿಂದ ಅದನ್ನು ಶೀಘ್ರವೇ ಕೊನೆಗೊಳಿಸಬೇಕು ಎಂದು ಪ್ರಧಾನಿ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ತಿಳಿಸಿದ್ದಾರೆ ಎಂದು ಸರ್ಕಾರ ಸರ್ವಪಕ್ಷ ಸಭೆಗೆ ಮಾಹಿತಿ ನೀಡಿದೆ.

