ಹೈದರಾಬಾದ್: ಆಂಧ್ರ ಪ್ರದೇಶದಲ್ಲಿ ಖಾಸಗಿ ಬಸ್ ಹಾಗೂ ಟಿಪ್ಪರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪರಿಹಾರ ಘೋಷಿಸಿದ್ದಾರೆ. ಪ್ರಧಾನ ಮಂತ್ರಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (Pಒಓಖಈ)ಯಿಂದ ಮೃತರ ಕುಟುಂಬಕ್ಕೆ ತಲಾ ₹2 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರ ಚಿಕಿತ್ಸೆಗೆ ತಲಾ ₹50 ಸಾವಿರ ಪರಿಹಾರವನ್ನು ಘೋಷಿಸಲಾಗಿದೆ.
ಏನಿದು ಘಟನೆ?
ಆಂಧ್ರಪ್ರದೇಶ ಮಾರ್ಕಪುರಂ ಜಿಲ್ಲೆಯಲ್ಲಿ ಗುರುವಾರ ಬೆಳಿಗ್ಗೆ ಖಾಸಗಿ ಬಸ್ ಹಾಗೂ ಟಿಪ್ಪರ್ ನಡುವೆ ಅಪಘಾತ ಸಂಭವಿಸಿ ಬೆಂಕಿ ಹೊತ್ತಿಕೊಂಡಿದ್ದರಿಂದ 14 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ. ಹರ್ಷವರ್ಧನ್ ರಾಜು ತಿಳಿಸಿದ್ದರು. 13 ಮಂದಿ ಸಜೀವ ದಹನವಾಗಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿಯ(ಸಿಎಮ್‌ಒ) ಅಧಿಕೃತ ಪ್ರಕಟಣೆ ತಿಳಿಸಿದೆ.
ಹರಿಕೃಷ್ಣ ಟ್ರಾವೆಲ್ಸ್‌ಗೆ ಸೇರಿದ ಬಸ್ ಹಾಗೂ ಜಲ್ಲಿ ತುಂಬಿದ್ದ ಟಿಪ್ಪರ್ ಮಾರ್ಕಪುರಂ ಸಮೀಪದ ರಾಯವರಂ ಎಂಬಲ್ಲಿ ಅಪಘಾತಕ್ಕೀಡಾಗಿವೆ. ಬಸ್ ಡಿಕ್ಕಿಯ ರಭಸಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಎರಡೂ ವಾಹನಗಳು ಸಂಪೂರ್ಣ ಸುಟ್ಟು ಕರಕಲಾಗಿವೆ ಎಂದು ಮಾರ್ಕಪುರಂ ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಟಿಪ್ಪರ್ ಲಾರಿ ಅತಿ ವೇಗದಲ್ಲಿ ಚಲಿಸಿದ್ದರಿಂದ ಈ ದುರಂತ ಸಂಭವಿಸಿದೆ. ಅಪಘಾತಕ್ಕೀಡಾದ ಬಸ್‌ನಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಹಿಂದಿನ ಸೀಟುಗಳಲ್ಲಿ ಕುಳಿತುಕೊಂಡಿದ್ದವರು ತಪ್ಪಿಸಿಕೊಳ್ಳಲಾಗದೆ ಸಜೀವ ದಹನವಾಗುದ್ದಾರೆ ಎಂದು ಅಂದಾಜಿಸಲಾಗಿದೆ.
ಮುರ್ಮು ಸಂತಾಪ
'ಆಂಧ್ರಪ್ರದೇಶದ ಮಾರ್ಕಪುರಂ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಬಸ್ ಅಪಘಾತದ ಬಗ್ಗೆ ತಿಳಿದು ತೀವ್ರ ದುಃಖವಾಯಿತು. ಮೃತರ ಕುಟುಂಬಸ್ಥರಿಗೆ ಸಂತಾಪ ವ್ಯಕ್ತಪಡಿಸುತ್ತೇನೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ' ಎಂದು ಸಾಮಾಜಿಕ ಮಾಧ್ಯಮ ಎಕ್ಸ್ ಪೋಸ್ಟ್‌ನಲ್ಲಿ ದ್ರೌಪದಿ ಮುರ್ಮು ತಿಳಿಸಿದ್ದಾರೆ.

