ಕುಂಬಳೆ: ಮದ್ಯಸೇವಿಸಿ ವಾಹನ ಚಲಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ನೋಟೀಸು ನೀಡಿದ್ದ ಲಾರಿ ಚಾಲಕ, ಮನೆಗೆ ತೆರಳಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಕುಂಬಳೆ ಕಟ್ಟತ್ತಡ್ಕದಲ್ಲಿ ನಡೆದಿದೆ.
ಕಟ್ಟತ್ತಡ್ಕ ಎಕ್ಸ್‍ಚೇಂಜ್ ರಸ್ತೆ ನಿವಾಸಿ ಪ್ರವೀನ್‍ಕುಮಾರ್(35)ಮೃತಪಟ್ಟ ಯುವಕ. ಮಂಗಳೂರಿನ ಕೋಳಿ ಫಾರ್ಮ್ ಒಂದರ ಲಾರಿ ಚಾಲಕನಾಗಿ ದುಡಿಯುತ್ತಿರುವ ಪ್ರವೀಣ್‍ಕುಮಾರ್, ಸೋಮವಾರ ರಾತ್ರಿ ಕೆಲಸ ಮುಗಿಸಿ ಬೈಕಲ್ಲಿ ಮನೆಗೆ ವಾಪಸಾಗುವ ಮಧ್ಯೆ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರು ಪ್ರವೀಣ್ ಕುಮಾರ್ ಮದ್ಯ ಸೇವಿಸಿರುವ ಬಗ್ಗೆ ನೋಟೀಸು ನೀಡಿದ್ದರು. ಮನೆಗೆ ಆಗಮಿಸಿದ್ದ ಪ್ರವೀಣ್‍ಕುಮಾರ್ ಅವರು, ಮರುದಿನ ಬೆಳಗ್ಗೆ ವಿಷ ಸೇವಿಸಿ ಗಂಭೀರಾವಸ್ಥೆಯಲ್ಲಿರುವುದು ಕಂಡುಬಂದಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ವಿಷ ಸೇವಿಸಲು ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

