ನವದೆಹಲಿ: ಜೋರಾಗಿ ಬೀಸಿದ ಗಾಳಿಯಿಂದ ತಾಂತ್ರಿಕ ದೋಷ ಉಂಟಾಗಿ ಸಂಸತ್‌ನ ಪ್ರವೇಶ ದ್ವಾರದ ಬೂಮ್ ಬ್ಯಾರಿಯರ್ ಸೋಮವಾರ ಕೆಳಗೆ ಬಿದ್ದಿದೆ.
ಸಂಸತ್ ಭವನದ ಸಂಕೀರ್ಣದ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು.
ಇದು ಯಾವುದೇ ಭದ್ರತಾ ಬೆದರಿಕೆಯಲ್ಲ ಎಂಬುದು ಗೊತ್ತಾಗಿದೆ.
ಸ್ವಲ್ಪ ಸಮಯದ ನಂತರ ವಿಜಯ್ ಚೌಕ ಬಳಿಯ ಗೇಟ್ ಮೂಲಕ ಸಾಮಾನ್ಯ ವಾಹನಗಳ ಸಂಚಾರ ಪುನರಾರಂಭವಾಯಿತು.
'ಸಂಕೀರ್ಣದೊಳಗೆ ವಾಹನಗಳು ನೇರವಾಗಿ ಪ್ರವೇಶಿಸುವುದನ್ನು ತಡೆಯುವ ಬೂಮ್ ಬ್ಯಾರಿಯರ್ ಮೇಲಕ್ಕೆ ಹೋಗದೆ ಸ್ವಯಂಚಾಲಿತವಾಗಿ ಕೆಳಗಿಳಿಯಿತು. ಗಾಳಿಯಿಂದಾಗಿ ಈ ಸಮಸ್ಯೆ ಕಾಣಿಸಿಕೊಂಡಿದೆಯೇ ಅಥವಾ ಆ ನಿರ್ದಿಷ್ಟ ಸಮಯದಲ್ಲಿ ಬಂದ ಕಾರಿನ ಪ್ರವೇಶದ ಸ್ಟಿಕ್ಕರ್ ಅನ್ನು ಸ್ಕ್ಯಾನ್ ಮಾಡಲು ವಿಫಲವಾಗಿದೆಯೇ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ' ಎಂದು ಮೂಲಗಳು ತಿಳಿಸಿವೆ.
2023ರ ಡಿಸೆಂಬರ್‌ನಲ್ಲಿ ಭದ್ರತಾ ಉಲ್ಲಂಘನೆಯ ನಂತರ, 2024ರ ಮೇ ತಿಂಗಳಿನಲ್ಲಿ ಸಂಸತ್ ಕಟ್ಟಡದ ಭದ್ರತೆಗಾಗಿ ಸಿಐಎಸ್‌ಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಅರೆಸೈನಿಕ ಪಡೆಯ 3,300 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

