ಮುಂಬೈ: ಭಾರತದಲ್ಲಿ ಎಲ್‌ಜಿಪಿ ಸಮಸ್ಯೆ ಉಲ್ಬಣಗೊಳ್ಳುತ್ತಿರುವ ಕಾರಣ, ಕೆಲವು ಪೆಟ್ರೋಲ್ ಮತ್ತು ಡೀಸೆಲ್ ಬಂಕ್‌ಗಳಲ್ಲಿ ಸೀಮೆಎಣ್ಣೆ ವಿತರಿಸಲು ಮಹಾರಾಷ್ಟ್ರ ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ರಕ್ಷಣಾ ಸಚಿವ ಛಗನ್ ಭುಜಬಲ್ ಅವರು ವಿಧಾನಸಭೆಗೆ ಸೋಮವಾರ ತಿಳಿಸಿದರು.
'ಎಲ್‌ಜಿಪಿಗೆ ಪರ್ಯಾರ್ಯವಾಗಿ ಸೀಮೆಎಣ್ಣೆ ನೀಡಲು ಚಿಂತನೆ ನಡೆಸುತ್ತಿದ್ದೇವೆ. ಈ ಬಗ್ಗೆ ನಾಗ್ಪುರ ಹೈಕೋರ್ಟ್‌ಗೆ ಮಾರ್ಚ್ 11ರಂದು ಮಾಹಿತಿ ನೀಡಿದ್ದೇವೆ. ಇದರ ಜೊತೆಗೆ ಎಲ್‌ಜಿಪಿ ಪೂರೈಕೆ ಕುರಿತು ಮುಖ್ಯ ಕಾರ್ಯದರ್ಶಿಯ ನೇತೃತ್ವದಲ್ಲಿ ಪರಿಶೀಲನೆಯನ್ನೂ ನಡೆಸಲಾಗಿದೆ' ಎಂದು ಮಾಹಿತಿ ನೀಡಿದರು.
ವಿಧಾನಸಭೆಯಲ್ಲಿ ಮಾತನಾಡುವ ಮೊದಲು ಸಚಿವರು, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್), ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಮತ್ತು ಭಾರತೀಯ ತೈಲ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್) ಅಧಿಕಾರಿಗಳೊಂದಿಗೆ ಚರ್ಚಿಸಿದ್ದರು.

