ಗುವಾಹಟಿ: ಅಸ್ಸಾಂನ ಭಾರತೀಯ ವಾಯುಪಡೆ ಕೇಂದ್ರದಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಯೋರ್ವನನ್ನು ಪಾಕಿಸ್ತಾನದ ಪರ ಬೇಹುಗಾರಿಕೆ ಮತ್ತು ಸೂಕ್ಷ್ಮ ಮಾಹಿತಿ ಹಂಚಿಕೊಂಡ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ರಾಜಸ್ಥಾನದ ಗುಪ್ತಚರ ಇಲಾಖೆ ತಿಳಿಸಿದೆ.
ಉತ್ತರ ಪ್ರದೇಶದ ನಿವಾಸಿಯಾದ ಸುಮಿತ್ ಕುಮಾರ್(36) ಬಂಧಿತ ಆರೋಪಿ.
ರಾಜಸ್ಥಾನ ಗುಪ್ತಚರ ಮತ್ತು ವಾಯುಪಡೆಯ ಗುಪ್ತಚರ ಇಲಾಖೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಗುಪ್ತಚರ) ಪ್ರಫುಲ್ ಕುಮಾರ್ ತಿಳಿಸಿದ್ದಾರೆ.
ಜನವರಿ 2026ರಲ್ಲಿ ಜೈಸಲ್ಮೇರ್‌ನಿಂದ ಶಂಕಿತನೊಬ್ಬನ ಬಂಧನದೊಂದಿಗೆ ಈ ಕುರಿತ ತನಿಖೆ ಪ್ರಾರಂಭವಾಯಿತು. ಹೆಚ್ಚಿನ ತನಿಖೆ ನಡೆಸಿದಾಗ ಸುಮಿತ್ ಕುಮಾರ್ ಬಗ್ಗೆ ಮಾಹಿತಿ ಲಭಿಸಿತ್ತು. ಈತ ಪ್ರಸ್ತುತ ದಿಬ್ರುಗಢದ ಚಾಬುವಾದಲ್ಲಿರುವ ವಾಯುಪಡೆ ಕೇಂದ್ರದಲ್ಲಿ ಮಲ್ಟಿ-ಟಾಸ್ಕಿಂಗ್ ಸ್ಟಾಫ್(ಎಂಟಿಎಸ್) ಆಗಿ ಕೆಲಸ ಮಾಡುತ್ತಿದ್ದ. ವಿಚಾರಣೆಯ ಸಮಯದಲ್ಲಿ ಆರೋಪಿಯು 2023ರಿಂದ ಪಾಕಿಸ್ತಾನದ ಗುಪ್ತಚರ ಏಜೆಂಟ್‌ಗಳ ಜೊತೆ ಸಂಪರ್ಕದಲ್ಲಿದ್ದ ಮತ್ತು ಹಣಕ್ಕಾಗಿ ಗೌಪ್ಯ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದನೆಂದು ಬಹಿರಂಗಪಡಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಯು ವಾಯುಪಡೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳು, ಯುದ್ಧವಿಮಾನಗಳ ಸ್ಥಳಗಳು, ಕ್ಷಿಪಣಿ ವ್ಯವಸ್ಥೆಗಳು ಹಾಗೂ ಸಿಬ್ಬಂದಿ ಸಂಬಂಧಿತ ವಿವರಗಳನ್ನು ಪಾಕಿಸ್ತಾನದ ಏಜೆಂಟ್‌ಗಳ ಜೊತೆ ಹಂಚಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
1923ರ ಅಧಿಕೃತ ರಹಸ್ಯ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

