ನವದೆಹಲಿ: ದೇಶದಲ್ಲಿ ವಿಐಪಿ ಸಂಸ್ಕೃತಿ ಹೆಚ್ಚುತ್ತಿದ್ದು ಅದರಿಂದ ಜನಸಾಮಾನ್ಯರಿಗೆ ತೀವ್ರ ತೊಂದರೆ ಆಗುತ್ತಿದೆ ಎಂದು ರಾಜ್ಯಸಭೆ ಸಂಸದೆ ಜಯಾ ಬಚ್ಚನ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಇಂದು ರಾಜ್ಯಸಭೆಯ ಶೂನ್ಯ ವೇಳೆಯಲ್ಲಿ ಮಾತನಾಡಿದ ಅವರು, ರಾಜಕಾರಣಿಗಳು, ಉನ್ನತ ಅಧಿಕಾರಿಗಳು, ವಿವಿಧ ಗಣ್ಯರು ಸೇರಿದಂತೆ ವಿಐಪಿಗಳಿಗಾಗಿ ರಸ್ತೆಗಳಲ್ಲಿ ಜಿರೋ ಟ್ರಾಫಿಕ್ ಹಾಗೂ ಇತರ ಸವಲತ್ತುಗಳನ್ನು ನೀಡಲು ಜನಸಾಮಾನ್ಯರಿಗೆ ರಸ್ತೆಗಳನ್ನು ತಡೆಯಲಾತ್ತಿರುವುದು ತೀರಾ ವಿಷಾದನೀಯ ಎಂದರು.
ಈ ರೀತಿಯ ಕೆಟ್ಟ ಸಂಸ್ಕೃತಿಯನ್ನು ನಾನು ಜಗತ್ತಿನ ಬೇರೆ ಯಾವ ದೇಶದಲ್ಲೂ ನೋಡಿಲ್ಲ ಎಂದರು.
ವಿಐಪಿ ಸಂಸ್ಕೃತಿಯಿಂದ ದೇಶದ ಅಸಂಖ್ಯಾತ ನಾಗರಿಕರ ದೈನಂದಿನ ಜೀವನದಲ್ಲಿ ಭಾರಿ ತೊಂದರೆಯಾಗುತ್ತಿರುವುದು ನಿಲ್ಲಬೇಕು ಎಂದು ಒತ್ತಾಯಿಸಿದರು.
ಇತ್ತೀಚೆಗೆ ವಿಐಪಿಗಳ ಸಂಚಾರಕ್ಕಾಗಿ ರಾಜ್ಯಸಭೆಯ ಸದಸ್ಯರನ್ನು ಸಂಸತ್ತಿನ ಶಾರ್ದೂಲ ದ್ವಾರದ ಬಳಿ ತಡೆಹಿಡಿದಿದ್ದನ್ನು ಪ್ರಸ್ತಾಪಿಸಿ ಆಕ್ರೋಶ ವ್ಯಕ್ತಪಡಿಸಿದರು. ಇದೊಂದು ಅವಮಾನಕಾರಿ ನಡೆ ಎಂದರು.
ಈ ವಿಷಯವನ್ನು ಸರ್ಕಾರದೊಂದಿಗೆ ಚರ್ಚಿಸುವಂತೆ ಜಯಾ ಅವರು ಸಭಾಪತಿ ಸಿ ಪಿ ರಾಧಾಕೃಷ್ಣನ್ ಅವರನ್ನು ಒತ್ತಾಯಿಸಿದರು.

