ದುಬೈ: ಸೌದಿ ಅರೇಬಿಯಾದ ಅಲ್ ಖಾರ್ಜ್ ಎಂಬ ಪ್ರಾಂತ್ಯದ ವಸತಿ ಪ್ರದೇಶವೊಂದರಲ್ಲಿ ಮಿಲಿಟರಿ ಸ್ಫೋಟಕ ಸಿಡಿದು ಭಾರತೀಯ ವ್ಯಕ್ತಿ ಸೇರಿ ಇಬ್ಬರು ಮೃತಪಟ್ಟಿದ್ದಾರೆ ಎಂದು ನಿನ್ನೆ ಸೌದಿ ಅರೇಬಿಯಾದ ಸಿವಿಲ್ ಡಿಫೆನ್ಸ್ ಘಟಕದ ಅಧಿಕಾರಿಗಳು ತಿಳಿಸಿದ್ದರು.
ಆದರೆ, ಭಾರತೀಯ ವ್ಯಕ್ತಿ ಮೃತನಾಗಿಲ್ಲ ಎಂದು ಇಂದು ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಘಟನೆಯಲ್ಲಿ 12 ಜನ ಗಂಭೀರವಾಗಿ ಗಾಯಗೊಂಡಿದ್ದು ಇರಾನ್‌ನಿಂದ ಹಾರಿ ಬಂದಿರಬಹುದಾದ ಮಿಲಿಟರಿ ಡ್ರೋನ್ ರೀತಿಯ ಸ್ಫೋಟಕದಿಂದ ಸಂಭವಿಸಿದೆ ಎಂದು ಅಲ್ಲಿನ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ ಖಾರ್ಜ್‌ನ ಸ್ವಚ್ಛತಾ ನಿರ್ವಹಣೆಯ ಕಂಪನಿಯೊಂದರ ಕಾಂಪೌಂಡ್‌ನಲ್ಲಿ ಸ್ಫೋಟ ಸಂಭವಿಸಿದೆ. ಇಲ್ಲಿ ಕಾರ್ಯನಿರ್ವಹಿಸುತ್ತಿದ್ದವರಲ್ಲಿ ಒಬ್ಬ ಬಾಂಗ್ಲಾದೇಶ ಪ್ರಜೆ ಮೃತರಾಗಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಮೃತನ ಹಾಗೂ ಗಾಯಾಳುಗಳ ಹೆಸರನ್ನು ಸೌದಿ ಅರೇಬಿಯಾ ಇನ್ನೂ ಬಹಿರಂಗಪಡಿಸಿಲ್ಲ ಎಂದು ಪಿಟಿಐ ವರದಿ ಮಾಡಿದೆ.
ಏತನ್ಮಧ್ಯೆ ಟ್ವೀಟ್ ಮಾಡಿರುವ ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಈ ಘಟನೆಯಲ್ಲಿ ಭಾರತೀಯ ಪ್ರಜೆ ಸತ್ತಿಲ್ಲ, ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಅಲ್ ಖಾರ್ಜ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ, ನಮ್ಮ ಅಧಿಕಾರಿಗಳು ಅವರನ್ನು ಭೇಟಿ ಮಾಡಿದ್ದಾರೆ ಎಂದು ತಿಳಿಸಿದೆ.
ಫೆಬ್ರುವರಿ 28 ರಂದು ಆರಂಭವಾಗಿರುವ ಅಮೆರಿಕ-ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದಲ್ಲಿ ಇರಾನ್, ಸೌದಿ ಅರೇಬಿಯಾ ಸೇರಿ ಇತರ ಗಲ್ಫ್ ರಾಷ್ಟ್ರಗಳ ಮೇಲೆ ಕ್ಷಿಪಣಿ, ಡ್ರೋನ್ ದಾಳಿಗಳನ್ನು ನಡೆಸುತ್ತಲೇ ಇದೆ.

