ಜಮ್ಮು: ಮದುವೆ ಸಮಾರಂಭಕ್ಕೆ ತೆರಳಿದ್ದ ವೇಳೆ, ನ್ಯಾಷನಲ್ ಕಾನ್ಫರೆನ್ಸ್(ಎನ್‌ಸಿ) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಹಾಗೂ ಜಮ್ಮು-ಕಾಶ್ಮೀರದ ಉಪಮುಖ್ಯಮಂತ್ರಿ ಸುರೀಂದರ್ ಚೌಧರಿ ಅವರ ಮೇಲೆ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಲು ಯತ್ನಿಸಿದ ಘಟನೆ ಬುಧವಾರ ರಾತ್ರಿ ನಡೆದಿದೆ.
ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಆರೋಪಿಯು ಮದ್ಯದ ನಶೆಯಲ್ಲಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಆರೋಪಿ,70 ವರ್ಷದ ಕಮಲ್ ಸಿಂಗ್ ಜಮ್ವಾಲ್ ಅವರನ್ನು ಬಂಧಿಸಲಾಗಿದೆ. ಆರೋಪಿಯು ಪುರಾನಿ ಮಂಡಿ ನಿವಾಸಿ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜಮ್ಮುವಿನ ಹೊರವಲಯದಲ್ಲಿರುವ ಐಷಾರಾಮಿ ಪ್ರದೇಶ ಗ್ರೇಟರ್ ಕೈಲಾಶ್‌ನಲ್ಲಿ ಈ ಘಟನೆ ನಡೆದಿದೆ. ಪಕ್ಷದ ಮುಖಂಡ ಬಿ.ಎಸ್.ಚೌಹಾಣ್ ಅವರ ಪುತ್ರನ ಮದುವೆಯಾಗಿದ್ದು, ಶುಭ ಕೋರುವುದಕ್ಕಾಗಿ ಅಬ್ದುಲ್ಲಾ ಹಾಗೂ ಡಿಸಿಎಂ ಚೌಧರಿ ಬಂದಿದ್ದರು. ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ, ಫಾರೂಕ್ ಅಬ್ದುಲ್ಲಾ ಹಾಗೂ ಡಿಸಿಎಂ ಚೌಧರಿ ಹೊರಬರುತ್ತಿದ್ದರು.
'ಮದುವೆ ಮಂಟಪದ ಹೊರಭಾಗದಲ್ಲಿ ಆರೋಪಿಯು ಕಾಯುತ್ತಿದ್ದ. ಅಬ್ದುಲ್ಲಾ ಹಾಗೂ ಚೌಧರಿ ಅವರು ಹೊರಗೆ ಬರುತ್ತಿದ್ದಂತೆಯೇ ಅವರ ಮೇಲೆ ಗುಂಡು ಹಾರಿಸಲು ಆರೋಪಿ ಯತ್ನಿಸಿದ್ದಾನೆ. ಆಗ, ಸ್ಥಳದಲ್ಲಿಯೇ ಇದ್ದ ಇಬ್ಬರು ಪೊಲೀಸ್ ಅಧಿಕಾರಿಗಳು ಆತನನ್ನು ತಕ್ಷಣವೇ ತಡೆದಿದ್ದಾರೆ' ಎಂದು ಅಧಿಕಾರಿಗಳು ಹೇಳಿದ್ದಾರೆ.
'ಪೊಲೀಸ್ ಅಧಿಕಾರಿಗಳಿಂದ ಕೊಸರಿಕೊಂಡು, ಗುಂಡು ಹಾರಿಸಲು ಆರೋಪಿ ಯತ್ನಿಸಿದ್ದಾನೆ. ಬಂದೂಕು ಕಿತ್ತುಕೊಂಡ ಪೊಲೀಸ್ ಅಧಿಕಾರಿಗಳು, ಆತನನ್ನು ವಶಕ್ಕೆ ಪಡೆದರು' ಎಂದೂ ಹೇಳಿದ್ದಾರೆ.

