ತಿರುಚಿರಾಪಳ್ಳಿ(PTI): 'ಕೇವಲ ಒಂದು ಕುಟುಂಬದ ಏಳಿಗೆಗಾಗಿ ಶ್ರಮಿಸುವ ಸರ್ಕಾರ ರಾಜ್ಯದಲ್ಲಿರಬೇಕು ಎಂಬುದು ತಮಿಳುನಾಡು ಜನರ ಬಯಕೆಯಲ್ಲ. ರಾಜ್ಯದ ಪ್ರತಿಯೊಂದು ಕುಟುಂಬಕ್ಕಾಗಿ ಶ್ರಮಿಸುವ ಸರ್ಕಾರವನ್ನು ಅವರು ಬಯಸುತ್ತಿದ್ದಾರೆ' ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದರು.
ಎನ್‌ಡಿಎ ವತಿಯಿಂದ ಇಲ್ಲಿ ಹಮ್ಮಿಕೊಂಡಿದ್ದ ಬೃಹತ್ ರ‍್ಯಾಲಿಯಲ್ಲಿ ಮಾತನಾಡಿದ ಅವರು, 'ಎನ್‌ಡಿಎದಿಂದ ಮಾತ್ರ ರಾಜ್ಯದಲ್ಲಿ ಬದಲಾವಣೆ ತರಲು ಸಾಧ್ಯ ಎಂಬುದು ರಾಜ್ಯದ ಜನರಿಗೆ ಗೊತ್ತಾಗಿದೆ' ಎಂದರು.
ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಈ ವೇಳೆ, ಮೋದಿ ಅವರು ಜನವರಿ 23ರಿಂದ ರಾಜ್ಯಕ್ಕೆ ನೀಡುತ್ತಿರುವ ಮೂರನೇ ಭೇಟಿ ಇದಾಗಿದೆ.
'ಡಿಎಂಕೆ ಆಡಳಿತದಲ್ಲಿ ಪ್ರತಿಯೊಂದು ಕೆಲಸದ ಆರಂಭ ಹಾಗೂ ಮುಕ್ತಾಯ ಒಂದು ಕುಟುಂಬದಿಂದಲೇ ಆಗುತ್ತದೆ. 2021ರಲ್ಲಿ ಜನರು ಡಿಎಂಕೆಗೆ ಅಧಿಕಾರ ನೀಡಿದರು. ಅಧಿಕಾರಕ್ಕೇರಿದ ಬಳಿಕ ಡಿಎಂಕೆ ತನ್ನ ಹೊಣೆಗಾರಿಕೆ ನಿಭಾಯಿಸುವ ಬದಲು ಜನಾದೇಶಕ್ಕೇ ದ್ರೋಹ ಬಗೆಯಿತು' ಎಂದು ವಾಗ್ದಾಳಿ ನಡೆಸಿದರು.
'ಎಲ್ಲ ನದಿಗಳು ಸಮುದ್ರವನ್ನೇ ಸೇರುವಂತೆ ತಮಿಳುನಾಡಿನಲ್ಲಿ ಭ್ರಷ್ಟಾಚಾರದ ಮೂಲಕ ಸಂಗ್ರಹಗೊಂಡ ಎಲ್ಲ ಹಣ ಒಂದು ಕುಟುಂಬಕ್ಕೆ ಸೇರುತ್ತದೆ' ಎಂದು ಟೀಕಿಸಿದ ಅವರು, 'ಭ್ರಷ್ಟಾಚಾರಕ್ಕೆ ಸಂಬಂಧಿಸಿ 'ವೈಜ್ಞಾನಿಕ ಮಾದರಿ'ಗೆ ಡಿಎಂಕೆ ಕುಖ್ಯಾತಿ ಪಡೆದಿದೆ' ಎಂದೂ ಆರೋಪಿಸಿದರು.

