ನವದೆಹಲಿ (PTI): ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತು (ಎನ್‌ಸಿಇಆರ್‌ಟಿ) ಪಠ್ಯಪುಸ್ತಕಗಳಲ್ಲಿನ ಕಾನೂನು ವಿಷಯ ಪರಿಶೀಲಿಸಲು ವಾರದ ಒಳಗಾಗಿ ವಿಷಯ ತಜ್ಞರ ಸಮಿತಿಯನ್ನು ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
'ನ್ಯಾಯಾಂಗದ ಸಾಂಸ್ಥಿಕ ಕಾರ್ಯದಲ್ಲಿ ಆರೋಗ್ಯಕರ ಹಾಗೂ ವಸ್ತುನಿಷ್ಠ ಟೀಕೆಯನ್ನು ತಡೆಯುವ ಉದ್ದೇಶವನ್ನು ಈ ಪ್ರಕರಣದ ಆದೇಶವು ಹೊಂದಿಲ್ಲ' ಎಂದೂ ನ್ಯಾಯಾಲಯವು ಸ್ಪಷ್ಟಪಡಿಸಿದೆ.
ಎನ್‌ಸಿಇಆರ್‌ಟಿ ಪ್ರಕಟಿಸಿದ್ದ 8ನೇ ತರಗತಿಯ ಸಮಾಜವಿಜ್ಞಾನ ಪಠ್ಯಪುಸ್ತಕದಲ್ಲಿ 'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಎಂಬ ಅಧ್ಯಾಯದ ಕುರಿತು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠ, ವಿವಾದಾತ್ಮಕ ಅಧ್ಯಾಯ ಸೇರಿಸಿದ್ದ ಮೂವರು ತಜ್ಞರ ಸಮಿತಿಯನ್ನು ಮುಂದಿನ ಯಾವುದೇ ಪ್ರಕ್ರಿಯೆಗಳಿಂದ ಹೊರಗಿಡುವಂತೆ ಕೇಂದ್ರ ಸರ್ಕಾರ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶ ಹಾಗೂ ವಿಶ್ವವಿದ್ಯಾಲಯಗಳಿಗೆ ಸೂಚನೆ ನೀಡಿದೆ.
ವಿವಾದಾಸ್ಪದ ಪಠ್ಯ ರಚನೆ ಸಂದರ್ಭದಲ್ಲಿ ಮೈಕೆಲ್ ಡಾನಿಹೊ ಅವರು ಪಠ್ಯ ರಚನಾ ಸಮಿತಿಯ ಅಧ್ಯಕ್ಷರಾಗಿದ್ದರೆ, ಸುಪರ್ಣಾ ದಿವಾಕರ್ ಹಾಗೂ ಅಲೋಕ್ ಪ್ರಸನ್ನ ಕುಮಾರ್ ಸದಸ್ಯರಾಗಿದ್ದರು.
ಈ ಮೂವರು ತಜ್ಞರನ್ನು ಆದೇಶವನ್ನು ಮಾರ್ಪಡಿಸುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಮೂರ್ತಿ ಜಾಲ್‌ಮಾಲ್ಯಾ ಬಾಗ್ಚಿ, ನ್ಯಾಯಮೂರ್ತಿ ವಿಫುಲ್ ಎಂ. ಪಂಚೋಲಿ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿದೆ.
'ಕಾನೂನು ವಿಷಯಕ್ಕೆ ಸಂಬಂಧಿಸಿದ ಪಠ್ಯ ರಚನೆಯನ್ನು ನಿವೃತ್ತ ನ್ಯಾಯಮೂರ್ತಿ, ಶಿಕ್ಷಣ ತಜ್ಞರು, ಹಿರಿಯ ವಕೀಲರನ್ನು ಒಳಗೊಂಡು ಸಮಿತಿಯು ಅಂತಿಮಗೊಳಿಸಬೇಕು. ಇದಕ್ಕೆ ಭೋಪಾಲ್‌ನಲ್ಲಿರುವ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿಯ ನೆರವು ಪಡೆದುಕೊಳ್ಳಬೇಕು' ಎಂದು ತಿಳಿಸಿದೆ.
ಎಲ್ಲ ತರಗತಿಗಳ ಪಠ್ಯಪುಸ್ತಕ ಪರಿಶೀಲಿಸಲು ನಿರ್ದೇಶನ
ನವದೆಹಲಿ (ಪಿಟಿಐ): ಎಲ್ಲ ತರಗತಿಗಳ ಪಠ್ಯಪುಸ್ತಕಗಳನ್ನು ಪರಿಶೀಲಿಸುವಂತೆ ಎನ್‌ಸಿಆರ್‌ಇಟಿಗೆ ನಿರ್ದೇಶನ ನೀಡಲಾಗಿದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
'ಎನ್‌ಸಿಆರ್‌ಟಿಯನ್ನು ಆ ರೀತಿ ಮಾಡುವಂತೆ ಕೇಳುವ ಬದಲಾಗಿ ಕೇಂದ್ರ ಸರ್ಕಾರವೇ ತಜ್ಞರ ಸಮಿತಿಯನ್ನು ರಚಿಸಿದ್ದರೆ ಚೆನ್ನಾಗಿತ್ತು' ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನ್ಯಾಯಮೂರ್ತಿಗಳಾದ ಜಾಲ್‌ಮಾಲ್ಯಾ ಬಾಗ್ಚಿ ವಿಫುಲ್ ಎಂ. ಪಂಚೋಲಿ ಅವರನ್ನು ಒಳಗೊಂಡ ನ್ಯಾಯಪೀಠವು ತಿಳಿಸಿದೆ.
ಈ ವೇಳೆ ಮಧ್ಯಪ್ರವೇಶಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ '8ನೇ ತರಗತಿ ಅಲ್ಲದೇ ಎಲ್ಲ ತರಗತಿಗಳ ಪಠ್ಯಪುಸ್ತಕಗಳನ್ನು ಪರಿಶೀಲನೆ ನಡೆಸುವಂತೆ ಎನ್‌ಸಿಇಆರ್‌ಟಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಈ ಪಠ್ಯವನ್ನು ತಜ್ಞರ ಸಮಿತಿಯು ಪರಿಶೀಲನೆ ನಡೆಸಲಿದೆ' ಎಂದು ನ್ಯಾಯಪೀಠದ ಗಮನಸೆಳೆದರು. 'ನಾವು ವ್ಯವಸ್ಥಿತ ಬದಲಾವಣೆಗಳನ್ನು ತರುತ್ತಿದ್ದೇವೆ' ಎಂದು ಹೇಳಿದ ಅವರು 'ಈಗಾಗಲೇ ಆಗಿರುವ ತಪ್ಪಿಗೆ ಎನ್‌ಸಿಇಆರ್‌ಟಿ ನಿರ್ದೇಶಕರು ಬೇಷರತ್ ಕ್ಷಮೆಯಾಚಿಸಿದ್ದಾರೆ' ಎಂದು ತಿಳಿಸಿದರು.
ಕಿಡಿಗೇಡಿತನ- ಸುಪ್ರೀಂ ಆಕ್ಷೇಪ
ನವದೆಹಲಿ (ಪಿಟಿಐ): ಎನ್‌ಸಿಇಆರ್‌ಟಿ ಪುಸ್ತಕದ ಕುರಿತು ಫೆಬ್ರುವರಿ 21ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿತನದ ಅಭಿಪ್ರಾಯ ವ್ಯಕ್ತಪಡಿಸಿದವರ ವಿರುದ್ಧ ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.
'ಹಾಲಿ ಸಿಜೆಐ ಅವರನ್ನು ಹೇಗೆ ಎದುರಿಸಬೇಕು ಎಂಬುದನ್ನು ಅರಿತಿರಬೇಕು' ಎಂದು ಈ ವೇಳೆ ತಿಳಿಸಿದ್ದಾರೆ. 'ತೀರ್ಪಿನ ಕುರಿತಂತೆ ಸಮಾಜ ವಿರೋಧಿ ಶಕ್ತಿಗಳು ಬೇಜವಾಬ್ದಾರಿಯಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂತಹ ವೆಬ್‌ಸೈಟ್‌ಗಳನ್ನು ಪತ್ತೆಹಚ್ಚಿ ಸಮಗ್ರ ಮಾಹಿತಿ ಕಲೆಹಾಕಿ ಸೂಕ್ತ ಕ್ರಮ ಕೈಗೊಳ್ಳಬೇಕು' ಎಂದು ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠವು ತಿಳಿಸಿದೆ.

