ನವದೆಹಲಿ (PTI): ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟಿನಿಂದಾಗಿ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಆಗಿರುವ ನಡುವೆಯೇ, ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ರಷ್ಯಾ ವಿದೇಶಾಂಗ ಸಚಿವ ಸರ್ಗೇವ್ ಲಾವ್ರೋ ಮತ್ತು ಐರೋಪ್ಯ ಒಕ್ಕೂಟದ ವಿದೇಶಾಂಗ ವ್ಯವಹಾರಗಳ ಮುಖ್ಯಸ್ಥ ಕಾಜಾ ಕಲ್ಲಾಸ್ ಅವರ ಜೊತೆ ಬುಧವಾರ ಮಾತುಕತೆ ನಡೆಸಿದರು.
'ಸರ್ಗೇವ್ ಅವರ ಜೊತೆ ಉತ್ತಮ ದೂರವಾಣಿ ಸಂಭಾಷಣೆ ನಡೆಯಿತು. ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟು ಮತ್ತು ಅದಕ್ಕೆ ಸಂಬಂಧಿಸಿದ ರಾಜತಾಂತ್ರಿಕ ಪ್ರಯತ್ನಗಳ ಬಗ್ಗೆ ಮಾತುಕತೆ ನಡೆಸಿದ್ದೇವೆ. ನಮ್ಮ ದ್ವಿಪಕ್ಷೀಯ ಸಂಬಂಧ ವೃದ್ಧಿಯ ಬಗ್ಗೆಯೂ ಗಮನಹರಿಸಲಾಗಿದೆ' ಎಂದು ಜೈಶಂಕರ್ ತಿಳಿಸಿದ್ದಾರೆ.
ರಷ್ಯಾದಿಂದ ಕಚ್ಚಾ ತೈಲ ಖರೀದಿಯ ಬಗ್ಗೆ ಮಾತುಕತೆ ನಡೆದಿದೆಯೇ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ರಷ್ಯಾದಿಂದ ತೈಲ ಖರೀದಿಗೆ ಅಮೆರಿಕವು ಭಾರತಕ್ಕೆ 30 ದಿನಗಳ ತಾತ್ಕಾಲಿಕ ವಿನಾಯಿತಿ ನೀಡಿದ ಕೆಲವೇ ದಿನಗಳಲ್ಲಿ ಈ ಮಾತುಕತೆ ನಡೆದಿದೆ.
ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಬಗ್ಗೆ ಕಳೆದ ಕೆಲವು ದಿನಗಳಿಂದ ವಿವಿಧ ದೇಶಗಳ ವಿದೇಶಾಂಗ ಸಚಿವರ ಜೊತೆ ಜೈಶಂಕರ್ ಅವರು ದೂರವಾಣಿ ಮೂಲಕ ಚರ್ಚೆ ನಡೆಸುತ್ತಿದ್ದಾರೆ.

