ಪಟ್ನಾ: ನಿವೃತ್ತ ಲೆಫ್ಟಿನೆಂಟ್ ಜನರಲ್ ಸೈಯದ್ ಅತಾ ಹಸ್ನೈನ್ ಅವರು ಬಿಹಾರದ ರಾಜ್ಯಪಾಲರಾಗಿ ಶನಿವಾರ ಪ್ರಮಾಣವಚನ ಸ್ವೀಕರಿಸಿದರು.
ಪಟ್ನಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಗಮ್ ಕುಮಾರ್ ಸಾಹೂ ಅವರು ಇಲ್ಲಿನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಹಸ್ನೈನ್ ಅವರಿಗೆ ಪ್ರಮಾಣವಚನ ಬೋಧಿಸಿದರು.
ಈ ಹಿಂದೆ ಅರಿಫ್ ಮೊಹಮ್ಮದ್ ಖಾನ್ ರಾಜ್ಯಪಾಲರಾಗಿದ್ದರು.
ಈ ಸಮಾರಂಭದಲ್ಲಿ ಮುಖ್ಯಮಂತ್ರಿ ನಿತಿಶ್ ಕುಮಾರ್, ಸಚಿವ ಸಂಪುಟದ ಸದಸ್ಯರು ಹಾಗೂ ಹಿರಿಯ ಅಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಭಾರತೀಯ ಸೇನೆಯಲ್ಲಿ ಹಸ್ನೈನ್ ಅವರು ಹಲವು ಹುದ್ದೆಗಳನ್ನು ನಿರ್ವಹಿಸಿದ್ದರು. ನಿವೃತ್ತಿ ಬಳಿಕ 2018ರಲ್ಲಿ ಕಾಶ್ಮೀರ ಕೇಂದ್ರ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದರು. ನಂತರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎನ್‌ಡಿಎಮ್‌ಎ) ಸದಸ್ಯರಾಗಿ ಕೆಲಸ ಮಾಡಿದ್ದರು.

