ವಾಷಿಂಗ್ಟನ್: ವಿಶ್ವದ ಹಲವು ರಾಷ್ಟ್ರಗಳ ಮೇಲೆ ಹೇರಿದ್ದ ಸುಂಕವನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದರೂ, ತೆರಿಗೆ ವಿಧಿಸುವ ಪರಮಾಧಿಕಾರ ನನಗೆ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
'ಇನ್ನೊಂದು ಸ್ವರೂಪದಲ್ಲಿ ತೆರಿಗೆ ವಿಧಿಸುವ ಪರಮಾಧಿಕಾರ ನನಗೆ ಇದೆ, ಈಗಾಗಲೇ ಅದನ್ನು ಆರಂಭಿಸಿದ್ದೇನೆ' ಎಂದು 'ಟ್ರುಥ್' ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ತೆರಿಗೆ ವಿಧಿಸಿದ್ದನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದ ಕೆಲವೇ ದಿನಗಳಲ್ಲಿ ಟ್ರಂಪ್ ಮತ್ತೆ ಶೇ 10 ರಷ್ಟು ತೆರಿಗೆ ವಿಧಿಸಿದ್ದರು.
ವ್ಯಾಪಾರ ಪದ್ಧತಿಯಲ್ಲಿ ಇರುವ ಲೋಪಗಳನ್ನು ತಕ್ಷಣವೇ ತಿದ್ದಿಕೊಳ್ಳಬೇಕು ಎಂದು ಅಮೆರಿಕಕ್ಕೆ ಚೀನಾ ವಿನಂತಿ ಮಾಡಿದ ಬೆನ್ನಲ್ಲೇ ಟ್ರಂಪ್ ಅವರಿಂದ ಈ ಹೇಳಿಕೆ ಬಂದಿದೆ.
ಕೋರ್ಟ್‌ನ ತೀರ್ಪು ದೇಶದ ಸಂಸ್ಥಾಪಕರು ಅಮೆರಿಕದ ಸುಪ್ರೀಂ ಕೋರ್ಟ್‌ಗಾಗಿ ರೂಪಿಸಿದ ಆಶಯಗಳಿಗೆ ಅನುಗುಣವಾಗಿಲ್ಲ. ಅವರು ನಮ್ಮ ದೇಶಕ್ಕೆ ಹಾನಿ ಮಾಡುತ್ತಿದ್ದಾರೆ, ಅದನ್ನು ಮುಂದುವರಿಸಲಿದ್ದಾರೆ ಎಂದು ಟ್ರಂಪ್ ಟೀಕಿಸಿದ್ದಾರೆ.
'ಅಧ್ಯಕ್ಷನಾಗಿ ನಾನು ಮಾಡಬಹುದಾದ ಏಕೈಕ ಕೆಲಸವೆಂದರೆ ಅವರ ಕೆಟ್ಟ ನಡವಳಿಕೆಯನ್ನು ಎತ್ತಿ ತೋರಿಸುವುದು. ಸುಪ್ರೀಂ ಕೋರ್ಟ್ ಕುರಿತಾದ ಈ ಹೇಳಿಕೆಯು ಭವಿಷ್ಯದಲ್ಲಿ ನನಗೆ ಕೇವಲ ಸಮಸ್ಯೆಗಳನ್ನು ತಂದೊಡ್ಡಬಹುದು, ಆದರೆ ಸತ್ಯ ಹೇಳುವುದು ನನ್ನ ಕರ್ತವ್ಯ ಎಂದು ನಾನು ಭಾವಿಸುತ್ತೇನೆ' ಎಂದಿದ್ದಾರೆ.
ಬಲವಂತದ ಕಾರ್ಮಿಕ ಪದ್ಧತಿಯ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವೈಫಲ್ಯ ಹಾಗೂ ಅವು ಅಮೆರಿಕದ ಆರ್ಥಿಕತೆ ಮೇಲೆ ಹೊರೆ ಅಥವಾ ನಿರ್ಬಂಧಗಳನ್ನು ಹೇರುತ್ತಿವೆಯೇ ಎನ್ನುವುದರ ಬಗ್ಗೆ ತನಿಖೆ ನಡೆಸಲು ಚೀನಾ, ಐರೋಪ್ಯ ಒಕ್ಕೂಟ ಮತ್ತು ಜಪಾನ್ ಸೇರಿದಂತೆ 60 ಆರ್ಥಿಕತೆಗಳ ವಿರುದ್ಧ ಅಮೆರಿಕ ಕಳೆದ ವಾರ ಹೊಸ ವ್ಯಾಪಾರ ತನಿಖೆಗಳನ್ನು ಆರಂಭಿಸಿತ್ತು.
ಅಮೆರಿಕದ ಈ ತನಿಖೆ ಆದೇಶವು, 'ಅತ್ಯಂತ ಏಕಪಕ್ಷೀಯ, ಸ್ವೇಚ್ಛಾನುಸಾರ ಮತ್ತು ತಾರತಮ್ಯದಿಂದ ಕೂಡಿವೆ' ಎಂದು ಚೀನಾದ ವಾಣಿಜ್ಯ ಸಚಿವಾಲಯವು ಟೀಕಿಸಿದೆ. ಅಲ್ಲದೆ ಅಮೆರಿಕ ವ್ಯಾಪಾರ ಅಡೆತಡೆಗಳನ್ನು ನಿರ್ಮಿಸಲು ಪ್ರಯತ್ನಿಸುತ್ತಿದೆ ಎಂದು ಅದು ಆರೋಪಿಸಿದೆ.
ಈ ನಡುವೆ, ಚೀನಾ ಮತ್ತು ಅಮೆರಿಕದ ವ್ಯಾಪಾರ ಅಧಿಕಾರಿಗಳು ಭಾನುವಾರ ಪ್ಯಾರಿಸ್‌ನಲ್ಲಿ ಮಾತುಕತೆಗಾಗಿ ಭೇಟಿಯಾಗಿದ್ದಾರೆ. ಈ ಮಾತುಕತೆಗಳು ಎರಡು ದಿನಗಳ ಕಾಲ ನಡೆಯಲಿವೆ ಎಂದು ಅಮೆರಿಕ ತಿಳಿಸಿದೆ.

