ಲಂಡನ್: ಯಹೂದಿ ಚಾರಿಟಿಗೆ ಸೇರಿದ ನಾಲ್ಕು ಸೇವಾ ಆಂಬುಲೆನ್ಸ್‌ಗಳಿಗೆ ಲಂಡನ್‌ನಲ್ಲಿ ಸೋಮವಾರ ನಸುಕಿನಲ್ಲಿ ಬೆಂಕಿ ಹಚ್ಚಲಾಗಿದೆ.
ಈ ದುಷ್ಕೃತ್ಯವನ್ನು ದ್ವೇಷದ ಅಪರಾಧ ಎಂದು ಪರಿಗಣಿಸಿರುವ ಬ್ರಿಟಿಷ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
'ಆಂಬುಲೆನ್ಸ್‌ಗಳಿಗೆ ಬೆಂಕಿ ಹಚ್ಚಿರುವುದು ಆಘಾತಕಾರಿ ಘಟನೆ. ಯಹೂದಿ ಸಮುದಾಯದೊಟ್ಟಿಗೆ ನಾನಿದ್ದೇನೆ' ಎಂದು ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ ಹೇಳಿದ್ದಾರೆ.
ಯಹೂದಿ ಸಮುದಾಯದವರೇ ಗೋಲ್ಡರ್ಸ್ ಗ್ರೀನ್‌ನಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದು, ದುಷ್ಕೃತ್ಯದ ವಿಷಯ ತಿಳಿಯುತ್ತಿದ್ದಂತೆ, ನೆರೆಹೊರೆಯ ಅಧಿಕಾರಿಗಳನ್ನು ಕರೆಸಿಕೊಳ್ಳಲಾಯಿತು ಎಂದು ಮೆಟ್ರೊಪಾಲಿಟನ್ ಪೊಲೀಸ್ ಪಡೆ ತಿಳಿಸಿದೆ.
'ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಶಂಕಿತರನ್ನು ಪತ್ತೆ ಹಚ್ಚಲಾಗುತ್ತಿದೆ' ಎಂದು ಪೊಲೀಸ್ ವರಿಷ್ಠಾಧಿಕಾರಿ ಸಾರಾ ಜಾಕ್ಸನ್ ತಿಳಿಸಿದ್ದಾರೆ.
ತುರ್ತು ವೈದ್ಯಕೀಯ ಸೇವೆ ಒದಗಿಸುವ ನಾಲ್ಕು ಆಂಬುಲೆನ್ಸ್‌ಗಳು ಬೆಂಕಿಗೆ ಆಹುತಿ ಆಗಿವೆ ಎಂದು ಲಂಡನ್‌ನ ಅಗ್ನಿಶಾಮಕ ದಳ ತಿಳಿಸಿದೆ.

