ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಬಿಕ್ಕಟ್ಟು ಭಾರತದ ಇಂಧನ ಆಮದುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಆಮದುಗಳ ಮೇಲೆ ಹೆಚ್ಚಿನ ಅವಲಂಬನೆ ಹೊಂದಿರುವುದರಿಂದ ದೇಶದಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಅಭಾವವೂ ಕಂಡುಬರುತ್ತಿದೆ. 2024ರಲ್ಲಿ ಭಾರತವು ಸುಮಾರು 21 ಮಿಲಿಯನ್ ಟನ್ ಎಲ್‌ಪಿಜಿಯನ್ನು, ಅಂದರೆ ಒಟ್ಟು ಅಗತ್ಯದ ಸುಮಾರು 65% ಅನ್ನು ಆಮದು ಮಾಡಿಕೊಂಡಿದೆ.
ಈ ಬಿಕ್ಕಟ್ಟಿನಿಂದ ಎಲ್‌ಪಿಜಿ ಬೆಲೆಗಳು ಏರಿಕೆಯಾಗಿದ್ದು, ಸಾಮಾನ್ಯ ಗ್ರಾಹಕರಿಗೆ ಇಂಧನದ ಲಭ್ಯತೆ ಮತ್ತು ಕೈಗೆಟುಕುವಿಕೆ ಮೇಲೆ ಪರಿಣಾಮ ಬೀರಿದೆ.
ಇಂತಹ ಸಮಸ್ಯೆಗೆ ಪರಿಹಾರವಾಗಿ ಸ್ಥಳೀಯ ಪರ್ಯಾಯದ ಅಗತ್ಯತೆಯ ನಡುವೆ, ಪುಣೆಯ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್‌ನ ನ್ಯಾಷನಲ್ ಕೆಮಿಕಲ್ ಲ್ಯಾಬೊರೇಟರಿ (ಅSIಖ-ಓಅಐ) ಡೈಮಿಥೈಲ್ ಈಥರ್ (ಆಒಇ) ಅನ್ನು ಅಭಿವೃದ್ಧಿಪಡಿಸಿದೆ. ಇದನ್ನು ಪರ್ಯಾಯ ಶುದ್ಧ ಇಂಧನವಾಗಿ ಎಲ್‌ಪಿಜಿಯೊಂದಿಗೆ ಮಿಶ್ರಣ ಮಾಡಬಹುದು.
ಅSIಖ-ಓಅಐನ ಕ್ಯಾಟಲಿಸಿಸ್ ವಿಭಾಗದ ಮುಖ್ಯ ವಿಜ್ಞಾನಿ ಟಿ. ರಾಜಾ ಮತ್ತು ಅವರ ತಂಡವು ಡಿಎಂಇ ಉತ್ಪಾದನೆಗೆ ಪೇಟೆಂಟ್ ಹೊಂದಿದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಇದು ಕಡಿಮೆ ವೆಚ್ಚದ ವೇಗವರ್ಧಕವನ್ನು ಬಳಸಿ ಮೆಥನಾಲ್ ಅನ್ನು ಪರಿಣಾಮಕಾರಿಯಾಗಿ ಡಿಎಂಇಗೆ ಪರಿವರ್ತಿಸುತ್ತದೆ. ಸಂಸ್ಥೆಯ ನಿರ್ದೇಶಕ ಆಶಿಶ್ ಲೆಲೆ ಅವರ ಪ್ರಕಾರ, ಡಿಎಂಇ ಶುದ್ಧವಾಗಿ ಸುಡುವ ಇಂಧನವಾಗಿದ್ದು, ಅಡುಗೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕ್ರಾಂತಿ ತರಬಲ್ಲದು.
ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಪರ್ಯಾಯ ಇಂಧನ
ಎಲ್‌ಪಿಜಿ ಮುಖ್ಯವಾಗಿ ಪ್ರೋಪೇನ್ ಮತ್ತು ಬ್ಯುಟೇನ್‌ನಿಂದ ಕೂಡಿದ್ದು, ಮನೆ ಮತ್ತು ಕೈಗಾರಿಕೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ ಆಮದು ಅವಲಂಬನೆ ಮತ್ತು ಬೆಲೆ ಏರಿಳಿತಗಳು ಸವಾಲುಗಳನ್ನುಂಟುಮಾಡುತ್ತವೆ. ಈ ಹಿನ್ನೆಲೆ ಡಿಎಂಇ ಸ್ಥಳೀಯ, ಪರಿಸರ ಸ್ನೇಹಿ ಮತ್ತು ಸುಸ್ಥಿರ ಪರ್ಯಾಯವಾಗಿ ಹೊರಹೊಮ್ಮಿದೆ.
ಡಿಎಂಇ ಅನ್ನು ಮೆಥನಾಲ್, ಕಲ್ಲಿದ್ದಲು, ಜೈವಿಕ ಇಂಧನ ಅಥವಾ ಇಂಗಾಲದ ಡೈಆಕ್ಸೈಡ್‌ನಂತಹ ಮೂಲಗಳಿಂದ ದೇಶೀಯವಾಗಿ ಉತ್ಪಾದಿಸಬಹುದು. ಇದನ್ನು ಎಲ್‌ಪಿಜಿಯೊಂದಿಗೆ ಮಿಶ್ರಣ ಮಾಡಿ ಹೆಚ್ಚಿನ ಮಾರ್ಪಾಡುಗಳಿಲ್ಲದೆ ಸ್ಟೌವ್‌ಗಳಲ್ಲಿ ಬಳಸಬಹುದಾಗಿದೆ. ಈ ಮಿಶ್ರಣವನ್ನು ಅSIಖ-ಓಅಐ ಮತ್ತು ಎಲ್‌ಪಿಜಿ ಸಲಕರಣೆ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.
ತಂತ್ರಜ್ಞಾನ ಅಭಿವೃದ್ಧಿ ಹೇಗೆ?
ಈ ತಂತ್ರಜ್ಞಾನವನ್ನು ವೇಗವರ್ಧಕ ಮತ್ತು ಎಂಜಿನಿಯರಿಂಗ್ ವಿನ್ಯಾಸ ಎರಡನ್ನೂ ಸುಧಾರಿಸುವ ಮೂಲಕ ಅಭಿವೃದ್ಧಿಪಡಿಸಲಾಗಿದೆ. ತಂಡವು ಮೆಥನಾಲ್ ಅನ್ನು ವೇಗವಾಗಿ ಡಿಎಂಇಗೆ ಪರಿವರ್ತಿಸುವ ವಿಶೇಷ ವೇಗವರ್ಧಕವನ್ನು ರೂಪಿಸಿದೆ. ಜೊತೆಗೆ, 10 ಬಾರ್ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪ್ರಕ್ರಿಯೆಯನ್ನು ವಿನ್ಯಾಸಗೊಳಿಸಿದ್ದು, ಡಿಎಂಇ ಅನ್ನು ನೇರವಾಗಿ ಸಿಲಿಂಡರ್‌ಗಳಲ್ಲಿ ತುಂಬುವ ವ್ಯವಸ್ಥೆ ಸಾದ್ಯವಾಗಿದೆ.
ಮೆಥನಾಲ್ ಮೂಲ ಏನು?
ಪ್ರಸ್ತುತ ಭಾರತವು ಇರಾನ್ ಸೇರಿದಂತೆ ಕೆಲವು ದೇಶಗಳಿಂದ ಮೆಥನಾಲ್ ಅನ್ನು ಆಮದು ಮಾಡಿಕೊಳ್ಳುತ್ತಿದೆ. ಆದರೆ ಕಲ್ಲಿದ್ದಲು, ಕೃಷಿ ತ್ಯಾಜ್ಯ ಮತ್ತು ಇಂಗಾಲದ ಡೈಆಕ್ಸೈಡ್‌ನಂತಹ ದೇಶೀಯ ಮೂಲಗಳಿಂದ ಮೆಥನಾಲ್ ಉತ್ಪಾದನೆ ಸಾಧ್ಯವಾಗಿದೆ.
ಮೀಥೇನ್ ನೈಸರ್ಗಿಕ ನಿಲದ ಮುಖ್ಯ ಅಂಶವಾಗಿದ್ದು, ಇದು ನೇರವಾಗಿ ಡಿಎಂಇ ಉತ್ಪಾದಿಸುವುದಿಲ್ಲ. ಮೊದಲು ಇದನ್ನು ಸಿಂಗ್ಯಾಸ್ (ಅಔ ಮತ್ತು ಊ₂) ಆಗಿ, ನಂತರ ಮೆಥನಾಲ್ ಆಗಿ ಪರಿವರ್ತಿಸಿ, ಅಂತಿಮವಾಗಿ ಡಿಎಂಇ ಉತ್ಪಾದಿಸಲಾಗುತ್ತದೆ.
ಇದರಿಂದ ಭವಿಷ್ಯದಲ್ಲಿ ಭಾರತ ತನ್ನದೇ ಮೆಥನಾಲ್ ಉತ್ಪಾದಿಸಿ ಆಮದು ಅವಲಂಬನೆಯನ್ನು ಕಡಿಮೆ ಮಾಡಬಹುದು. ಅಲ್ಪಾವಧಿಯಲ್ಲಿ ಎಲ್‌ಪಿಜಿಯೊಂದಿಗೆ 8% ಡಿಎಂಇ ಮಿಶ್ರಣ ಮಾಡಿದರೂ ಆಮದು ಪ್ರಮಾಣ ಕಡಿಮೆಯಾಗುತ್ತದೆ.
ಡಿಎಂಇ ಉತ್ಪಾದನಾ ವೆಚ್ಚವು ಮುಖ್ಯವಾಗಿ ಮೆಥನಾಲ್ ಬೆಲೆಯ ಮೇಲೆ ಅವಲಂಬಿತವಾಗಿದೆ. ಪ್ರಸ್ತುತ ಡಿಎಂಇ ವೆಚ್ಚವು ಮೆಥನಾಲ್ ಬೆಲೆಯ ಸುಮಾರು 1.8 ಪಟ್ಟು ಹೆಚ್ಚಾಗಿದೆ. ಆದರೆ ದೇಶೀಯ ಉತ್ಪಾದನೆ ಹೆಚ್ಚಿದಂತೆ ಇದು ಕಡಿಮೆಯಾಗುವ ಸಾಧ್ಯತೆಯಿದೆ.
ಎಲ್‌ಪಿಜಿ ಆಮದು ಕಡಿಮೆಯಾದರೆ ಭಾರತ ವರ್ಷಕ್ಕೆ ಸುಮಾರು 9,500 ಕೋಟಿ ರೂಪಾಯಿ ವಿದೇಶಿ ವಿನಿಮಯವನ್ನು ಉಳಿಸಬಹುದು. ಜೊತೆಗೆ ಡಿಎಂಇ ಶುದ್ಧ ದಹನದಿಂದ ಮಾಲಿನ್ಯ ಕಡಿಮೆಯಾಗುತ್ತದೆ.
ಡಿಎಂಇ ಪ್ರಯೋಜನಗಳು
ಡಿಎಂಇ ಕಡಿಮೆ ಮಸಿ, ಓಔx ಮತ್ತು Sಔx ಹೊರಸೂಸುವ ಶುದ್ಧ ಇಂಧನವಾಗಿದೆ. ಅಡುಗೆ, ವಾಹನ ಇಂಧನ ಮತ್ತು ಕೈಗಾರಿಕಾ ಬಳಕೆಗಳಿಗೆ ಇದು ಸೂಕ್ತವಾಗಿದೆ. ಇದು ಏರೋಸಾಲ್ ಪ್ರೊಪೆಲ್ಲಂಟ್‌ಗಳಲ್ಲಿ ಅಈಅಗಳಿಗೆ ಪರ್ಯಾಯವಾಗಿಯೂ ಬಳಕೆಯಾಗುತ್ತದೆ.
ಭಾರತೀಯ ಮಾನದಂಡಗಳ ಬ್ಯೂರೋ IS 18698:2024 ಪ್ರಕಾರ ಎಲ್‌ಪಿಜಿಯೊಂದಿಗೆ 20% ವರೆಗೆ ಡಿಎಂಇ ಮಿಶ್ರಣಕ್ಕೆ ಅನುಮತಿ ನೀಡಲಾಗಿದೆ. 8% ವರೆಗೆ ಮಿಶ್ರಣ ಮಾಡಿದರೆ ಈಗಿನ ಮೂಲಸೌಕರ್ಯದಲ್ಲಿ ಯಾವುದೇ ಬದಲಾವಣೆ ಅಗತ್ಯವಿಲ್ಲ.
ಉಜ್ವಲ ಯೋಜನೆಯಡಿಯಲ್ಲಿ 10.5 ಕೋಟಿ ಸಂಪರ್ಕಗಳಿಗೆ 8% ಮಿಶ್ರಣ ಜಾರಿಗೆ ತರಲು ದಿನಕ್ಕೆ ಸುಮಾರು 1,300 ಟನ್ ಡಿಎಂಇ ಉತ್ಪಾದನೆ ಅಗತ್ಯವಿದೆ.
ಪ್ರಸ್ತುತ CSIR-NCL ದಿನಕ್ಕೆ 2.5 ಟನ್ ಸಾಮರ್ಥ್ಯದ ಘಟಕ ಅಭಿವೃದ್ಧಿಗೆ ಮುಂದಾಗಿದೆ. ಮುಂದಿನ ಹಂತದಲ್ಲಿ 50-100 ಟನ್ ಸಾಮರ್ಥ್ಯದ ಘಟಕಗಳ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ.
ಇದಲ್ಲದೆ, 100% ಎಲ್‌ಪಿಜಿ, 100% ಡಿಎಂಇ ಅಥವಾ ಮಿಶ್ರಣ ಬಳಕೆಗಾಗಿ ಫ್ಲೆಕ್ಸ್-ಇಂಧನ ಬರ್ನರ್ ಅನ್ನು ಅಭಿವೃದ್ಧಿಪಡಿಸಲಾಗಿದೆ.
ಒಟ್ಟಿನಲ್ಲಿ, ಡಿಎಂಇ ವ್ಯಾಪಕ ಬಳಕೆ ಭಾರತದಲ್ಲಿ ಇಂಧನ ಆಮದು ಅವಲಂಬನೆಯನ್ನು ಕಡಿಮೆ ಮಾಡಿ, ಇಂಧನ ಭದ್ರತೆ ಹಾಗೂ ಪರಿಸರ ಸಂರಕ್ಷಣೆಗೆ ನೆರವಾಗಲಿದೆ.

