ಚೆನ್ನೈ: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ NDA ಮೈತ್ರಿಕೂಟದ ಸೀಟು ಹಂಚಿಕೆ ಅಂತಿಮಗೊಂಡಿದ್ದು, 234 ಸ್ಥಾನಗಳ ಪೈಕಿ ಎಐಎಡಿಎಂಕೆ 178 ಸ್ಥಾನಗಳು, ಬಿಜೆಪಿ 27 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ. ಉಳಿದಂತೆ ಮೈತ್ರಿಕೂಟದ ಇತರ ಪಕ್ಷಗಳಾದ ಪಿಎಂಕೆ ಹಾಗೂ ಎಎಂಎಂಕೆಗೆ ಕ್ರಮವಾಗಿ 18 ಮತ್ತು 11 ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಎಐಎಡಿಎಂಕೆ ನಾಯಕ ಎಡಪ್ಪಾಡಿ ಪಳನಿಸ್ವಾಮಿ, NDA ಮೈತ್ರಿಕೂಟದೊಳಗೆ ಸೀಟು ಹಂಚಿಕೆಯ ಮಾತುಕತೆಗಳು ಸುಗಮವಾಗಿ ನಡೆದವು ಹಾಗೂ ಮೈತ್ರಿಪಕ್ಷಗಳ ಸೀಟುಗಳನ್ನು ಅಧಿಕೃತವಾಗಿ ಅಂತಿಮಗೊಳಿಸಲಾಗಿದೆ ಎಂದು ದೃಢಪಡಿಸಿದರು. ಉಳಿದ ಮೈತ್ರಿಪಕ್ಷಗಳೊಂದಿಗಿನ ಮಾತುಕತೆ ಮುಂದುವರಿದಿದ್ದು, ಶೀಘ್ರವೇ ಅವುಗಳ ಸೀಟು ಹಂಚಿಕೆಯ ಕುರಿತು ಪ್ರಕಟಿಸಲಾಗುವುದು ಎಂದೂ ಅವರು ಹೇಳಿದರು.
ಮೈತ್ರಿಕೂಟದ ನಿರೀಕ್ಷೆಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಎಡಪ್ಪಾಡಿ ಪಳನಿಸ್ವಾಮಿ, ಎನ್ಡಿಎ ಗೆಲುವಿನ ಮೈತ್ರಿಕೂಟವಾಗಿದೆ. ಎನ್ಡಿಎ ಮೈತ್ರಿಕೂಟ ರಾಜ್ಯದಾದ್ಯಂತ ಎಲ್ಲ ಸ್ಥಾನಗಳಲ್ಲೂ ಜಯಭೇರಿ ಬಾರಿಸಲಿದ್ದು, ಎಐಎಡಿಎಂಕೆ ಸರಕಾರ ರಚಿಸಲಿದೆ ಎಂದು ಘೋಷಿಸಿದರು.
ಮೈತ್ರಿಕೂಟದೊಂದಿಗಿನ ಹೊಂದಾಣಿಕೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಮೈತ್ರಿಪಕ್ಷಗಳು ಭೇಟಿಯಾಗುವುದು ಸಹಜ ಸಂಗತಿ. ರಾಹುಲ್ ಗಾಂಧಿಯನ್ನು ಭೇಟಿಯಾಗಲು ಕನಿಮೋಳಿಯೇಕೆ ದಿಲ್ಲಿಗೆ ಹೋಗಿದ್ದರು ಎಂದು ಮರುಪ್ರಶ್ನಿಸಿದರು.
ಸಮ್ಮಿಶ್ರ ಸರಕಾರ ರಚನೆಯಾಗುವ ಸಾಧ್ಯತೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಎಐಎಡಿಎಂಕೆ ತನ್ನ ಸ್ವಂತ ಬಲದ ಮೇಲೆ ಸರಕಾರ ರಚಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

