ನಾಗ್ಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್‌ಎಸ್‌ಎಸ್ ) ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ಕ್ರಿಯಾಶೀಲತೆಯನ್ನು ಹೆಚ್ಚಿಸಬೇಕಾದ ತುರ್ತು ಅಗತ್ಯವಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಹೇಳಿದ್ದಾರೆ.
ಮಹಾರಾಷ್ಟ್ರದ ನಾಗ್ಪುರದಲ್ಲಿ ಗುರುವಾರ ನಡೆದ ಮರಾಠಿ ಪತ್ರಿಕೆ ʼತರುಣ್ ಭಾರತ್ʼನ ಶತಮಾನೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಹೀಗಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘವು ಒಳ್ಳೆಯ ಉದ್ದೇಶಕ್ಕಾಗಿ ಅಂತಹ ವೇದಿಕೆಗಳಲ್ಲಿ ತನ್ನ ಕ್ರಿಯಾಶೀಲತೆಯನ್ನು (ಆಯಕ್ಟಿವಿಸಂ) ಹೆಚ್ಚಿಸುವ ತುರ್ತು ಅವಶ್ಯಕತೆಯಿದೆ. ಎಲ್ಲರೂ ಸಾಮಾಜಿಕ ಮಾಧ್ಯಮಗಳನ್ನು ಒಳ್ಳೆಯ ಉದ್ದೇಶಕ್ಕಾಗಿ ಬಳಸಿಕೊಳ್ಳಬೇಕು ಎಂದೂ ಹೇಳಿದರು.
ಸಾಮಾಜಿಕ ಮಾಧ್ಯಮಗಳಲ್ಲಿ ರೀಲ್‌ಗಳು ಭಾರಿ ಗಮನ ಸೆಳೆಯುತ್ತಿವೆ. ಈಗಾಗಲೇ ಇಲ್ಲಿಯೂ ಕೆಲವು ವಿಷಯಗಳನ್ನು ಆರ್‌ಎಸ್‌ಎಸ್ ಪ್ರಸಾರ ಮಾಡುತ್ತಿದೆ. ಆದರೆ, ಇದು ಸಾಲದು. ಇದರ ಕ್ರೀಯಾಶೀಲತೆಯನ್ನು, ರಚನಾತ್ಮಕ ಕೆಲಸವನ್ನು ಹೆಚ್ಚಿಸಲು ನಾನು ಸಲಹೆ ನೀಡುತ್ತೇನೆ ಎಂದರು.
ಜನರನ್ನು ಒಟ್ಟುಗೂಡಿಸುವುದು ಮತ್ತು ಸಮಾಜವನ್ನು ಪರಿವರ್ತಿಸುವುದು ಇಂದಿನ ಅಗತ್ಯ. ಅದಕ್ಕೆ ಸಾಮಾಜಿಕ ಮಾಧ್ಯಮಗಳ ಕೊಡುಗೆಯೂ ಇದೆ ಎಂದರು.
ಆರ್‌ಎಸ್‌ಎಸ್‌ನ ಕೆಲಸ ಕಾರ್ಯಗಳು ದಿನದಿಂದ ದಿನಕ್ಕೆ ವಿಸ್ತರಣೆಯಾಗುತ್ತಿದೆ. ಆರ್‌ಎಸ್‌ಎಸ್‌ನ ಕೆಲಸ ಕಾರ್ಯಗಳಲ್ಲಿ ವಿಕೇಂದ್ರೀಕರಣದ ಅಗತ್ಯವಿದೆ ಎಂದು ಭಾಗವತ್ ಒತ್ತಿ ಹೇಳಿದರು.
ಸಾರ್ವಜನಿಕರ ನಿರೀಕ್ಷೆಗಳು ಹೆಚ್ಚಾದಂತೆ, ವಿವಿಧ ವಲಯಗಳಲ್ಲಿ ಸ್ವಯಂಸೇವಕರಿಗೆ ಬೇಡಿಕೆ ಹೆಚ್ಚುತ್ತಿದೆ. ಇದಕ್ಕಾಗಿ ನಾವು ಸಹ ಪ್ರತ್ಯೇಕ ಸಮನ್ವಯ ಕಾರ್ಯವಿಧಾನವನ್ನು ರಚಿಸುತ್ತೇವೆ. ಸಾಮಾಜಿಕ ಮಾಧ್ಯಮಗಳಿಗಾಗಿ ಆರ್‌ಎಸ್‌ಎಸ್‌ನಲ್ಲಿ ತಳಮಟ್ಟದಲ್ಲಿ ಸಮನ್ವಯ ಸಾಧಿಸಲು ʼಪ್ರದೇಶ ಮಟ್ಟದʼ ಘಟಕಗಳನ್ನು ಸ್ಥಾಪಿಸಲಾಗುತ್ತದೆ ಎಂದು ಅವರು ಇದೇ ವೇಳೆ ತಿಳಿಸಿದರು.

