HEALTH TIPS

ಕೇರಳ ವಿಧಾನಸಭೆ ಚುನಾವಣೆ | ಸಿಪಿಐ(ಎಂ)-SDPI 'ಒಪ್ಪಂದ' ಆರೋಪ; ಕಾಂಗ್ರೆಸ್-LDF ನಡುವೆ ತೀವ್ರ ವಾಗ್ವಾದ

ಮಲಪ್ಪುರಂ/ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಸಿಪಿಐ(ಎಂ) ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಜೊತೆ 'ಒಪ್ಪಂದ' ಮಾಡಿಕೊಂಡಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಈ ಬಗ್ಗೆ ರಾಜ್ಯದಲ್ಲಿ ರಾಜಕೀಯ ವಾಗ್ವಾದ ತೀವ್ರಗೊಂಡಿದೆ.

ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ, SDPI ರಾಜ್ಯಾದ್ಯಂತ ಸಿಪಿಐ(ಎಂ) ಅಭ್ಯರ್ಥಿಗಳನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಿದ್ದಾರೆ. ಪಿಡಿಪಿ ಕೂಡ ಎಲ್‌ ಡಿ ಎಫ್‌ ಗೆ ಬಹಿರಂಗ ಬೆಂಬಲ ಘೋಷಿಸಿದೆ ಎಂದು ಅವರು ತಿಳಿಸಿದ್ದಾರೆ.

ಈ ಬೆಳವಣಿಗೆ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಆತಂಕ ತಂದಿದ್ದು, ಅದರ ಪ್ರಮುಖ ಮೈತ್ರಿ ಪಾಲುದಾರ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ ನ ಮುಸ್ಲಿಂ ಮತ ಬ್ಯಾಂಕ್ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಇನ್ನೊಂದೆಡೆ, ಜಮಾತ್-ಇ-ಇಸ್ಲಾಮಿ ಬೆಂಬಲಿತ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಿದೆ ಎಂಬ ಸಿಪಿಐ(ಎಂ) ಟೀಕೆಗಳಿಗೆ ಪ್ರತಿಯಾಗಿ, ಕಾಂಗ್ರೆಸ್ ಎಸ್‌ಡಿಪಿಐ-ಪಿಡಿಪಿ 'ಒಪ್ಪಂದ' ಆರೋಪಗಳನ್ನು ರಾಜಕೀಯ ಆಯುಧವಾಗಿ ಬಳಸುತ್ತಿದೆ ಎಂಬ ವಿಶ್ಲೇಷಣೆ ಕೇಳಿ ಬರುತ್ತಿದೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ. ರವಿವಾರ ಮಲಪ್ಪುರಂನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಪಿಐ(ಎಂ) ಯಾವಾಗಲೂ ಎಲ್ಲಾ ರೀತಿಯ ಕೋಮುವಾದದ ವಿರುದ್ಧ ರಾಜಿಯಾಗದ ನಿಲುವು ಹೊಂದಿದೆ ಎಂದು ಹೇಳಿದ್ದಾರೆ.

ಯುಡಿಎಫ್ ರಾಜಕೀಯ ಲಾಭಕ್ಕಾಗಿ ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಅವರು, "ಅಲ್ಪಸಂಖ್ಯಾತ ಹಾಗೂ ಬಹುಸಂಖ್ಯಾತ ಕೋಮುವಾದ ಎರಡರ ವಿರುದ್ಧವೂ ನಾವು ಸದಾ ದೃಢ ನಿಲುವು ಹೊಂದಿದ್ದೇವೆ. ಕೆಲ ಮತಗಳಿಗಾಗಿ ಬದಲಾಗುವ ಅವಕಾಶವಾದಿ ನಿಲುವು ನಮ್ಮದಲ್ಲ" ಎಂದರು.

ಎಪ್ರಿಲ್ 9ರಂದು ನಡೆಯಲಿರುವ ಚುನಾವಣೆಗೆ ಮುನ್ನ ಸಿಪಿಐ(ಎಂ) ಹಲವು ಕ್ಷೇತ್ರಗಳಲ್ಲಿ ಎಸ್‌ ಡಿ ಪಿ ಐ ಜೊತೆ ಒಪ್ಪಂದ ಮಾಡಿಕೊಂಡಿದೆ ಎಂಬ ಪ್ರಶ್ನೆಗಳಿಗೆ ಅವರು ಯಾವುದೇ ಉತ್ತರ ನೀಡಲಿಲ್ಲ. ಎಸ್‌ ಡಿ ಪಿ ಐ ನಾಯಕರ ನಿಲುವು ಕುರಿತು ತಿಳಿದುಕೊಳ್ಳಲು ಮಾಧ್ಯಮಗಳು ಅವರನ್ನೇ ಸಂಪರ್ಕಿಸಬೇಕು ಎಂದು ಸಿಎಂ ಹೇಳಿದರು. ಆದರೆ, ಎಲ್‌ ಡಿ ಎಫ್‌ ಗೆ ಎಸ್‌ ಡಿ ಪಿ ಐ ಮತಗಳ ಅಗತ್ಯವಿಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಲಿಲ್ಲ.

ವಿರೋಧ ಪಕ್ಷದ ಆರೋಪಗಳನ್ನು ತಿರಸ್ಕರಿಸಿದ ಮುಖ್ಯಮಂತ್ರಿ, ಯುಡಿಎಫ್ ಸುಳ್ಳು ಮಾಹಿತಿಯ ಆಧಾರದ ಮೇಲೆ ಪ್ರಚಾರ ನಡೆಸುತ್ತಿದೆ ಮತ್ತು ಎಲ್‌ಡಿಎಫ್ ಸರ್ಕಾರದ ಸಾಧನೆಗಳನ್ನು ದುರ್ಬಲಗೊಳಿಸಲು ತಪ್ಪು ಮಾಹಿತಿ ಅಭಿಯಾನ ನಡೆಸುತ್ತಿದೆ ಎಂದು ಆರೋಪಿಸಿದರು.

2021ರಲ್ಲಿ ಎಲ್‌ಡಿಎಫ್ ಸತತ ಎರಡನೇ ಬಾರಿ ಅಧಿಕಾರಕ್ಕೆ ಬಂದಿರುವುದು ಯಾವುದೇ 'ಗಿಮಿಕ್' ಫಲಿತಾಂಶವಲ್ಲ, ಬದಲಿಗೆ ಕಾರ್ಯಕ್ಷಮತೆ ಮತ್ತು ಜನಕೇಂದ್ರಿತ ಆಡಳಿತದ ಪರಿಣಾಮ ಎಂದು ಅವರು ಹೇಳಿದರು. ಎರಡನೇ ಅವಧಿಯಲ್ಲಿ ರಾಜ್ಯವು ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ಹೇಳಿದರು.

ಸಾರ್ವಜನಿಕ ಶಿಕ್ಷಣ, ಆರೋಗ್ಯ ಕ್ಷೇತ್ರ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ನಡೆದ ಸುಧಾರಣೆಗಳನ್ನು ಪ್ರಮುಖ ಸಾಧನೆಗಳೆಂದು ಅವರು ಉಲ್ಲೇಖಿಸಿದರು. ಸರ್ಕಾರ ದೀರ್ಘಾವಧಿ ನೀತಿಗಳನ್ನು ಬದ್ಧತೆಯಿಂದ ಜಾರಿಗೆ ತಂದಿದ್ದು, ಘೋಷಿತ ಯೋಜನೆಗಳು ಸಮಯಕ್ಕೆ ಅನುಗುಣವಾಗಿ ಪೂರ್ಣಗೊಳ್ಳುತ್ತಿವೆ ಎಂದರು.

ಯುವಜನರ ಆಕಾಂಕ್ಷೆಗಳು ಹಾಗೂ ಸಮಗ್ರ ಅಭಿವೃದ್ಧಿಗೆ ಅನುಕೂಲಕರ ವಾತಾವರಣವನ್ನು ರಾಜ್ಯದಲ್ಲಿ ನಿರ್ಮಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

"ಮುಂದಿನ ಚುನಾವಣೆ ಕೇರಳವು ಅಭಿವೃದ್ಧಿಯ ಹಾದಿಯಲ್ಲಿ ಮುಂದುವರಿಯಬೇಕೇ ಅಥವಾ ವಿರಾಮ ಪಡೆಯಬೇಕೇ ಎಂಬುದನ್ನು ನಿರ್ಧರಿಸುವ ಅವಕಾಶವಾಗಿದೆ," ಎಂದು ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಕಳೆದ ದಶಕದಲ್ಲಿ ರಾಜ್ಯದಲ್ಲಿ ಕಂಡುಬಂದ ಬದಲಾವಣೆಗಳು ದೂರದೃಷ್ಟಿಯ ನೀತಿಗಳು ಮತ್ತು ಪರಿಣಾಮಕಾರಿ ಅನುಷ್ಠಾನದ ಫಲವಾಗಿದ್ದು, ಅಭಿವೃದ್ಧಿ ಮುಂದುವರಿಸಲು ಆಡಳಿತದ ಸ್ಥಿರತೆ ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries