ಜಲಂಧರ್: ಸ್ಟ್ಯಾಚ್ಯೂ ಆಫ್ ಲಿಬರ್ಟಿ.. ನ್ಯೂಯಾರ್ಕ್‌ನಲ್ಲಿರುವ ಈ ಪ್ರತಿಮೆ ಅಮೆರಿಕದ ರಾಷ್ಟ್ರೀಯ ಸ್ಮಾರಕವಾಗಿದೆ. ಅದರ ಪ್ರತಿಕೃತಿಯನ್ನು ಪಂಜಾಬ್‌ನ ಜಲಂಧರ್ ಮೂಲದ ಅನಿವಾಸಿ ಭಾರತೀಯರೊಬ್ಬರು ಡೋಬಾ ಪ್ರದೇಶದಲ್ಲಿರುವ ತಮ್ಮ ಮನೆ ಮೇಲೆ ಸ್ಥಾಪಿಸಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.
ಸಮೀಪದ ಪ್ರದೇಶಗಳ ಜನರು, ನಗರದ ಇತರೆ ಪ್ರದೇಶಗಳ ನಿವಾಸಿಗಳು ಇಲ್ಲಿಗೆ ಭೇಟಿ ನೀಡಿ ಚಿತ್ರಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
ಕಳೆದ 26 ವರ್ಷಗಳಿಂದ ನ್ಯೂಯಾರ್ಕ್‌ನಲ್ಲಿ ವಾಸಿಸುತ್ತಿರುವ ಗುರುಜಿತ್ ಸಿಂಗ್ ಮಥಾರು ಅವರು ತಮ್ಮ ಪೂರ್ವಜರ ಮನೆಯ ನಾಲ್ಕನೇ ಮಹಡಿಯನ್ನು ಸ್ವಾತಂತ್ರ್ಯ ಪ್ರತಿಮೆಯ ಪ್ರತಿಕೃತಯನ್ನು ನಿರ್ಮಾಣ ಮಾಡಿದ್ದಾರೆ. ಈ ಪ್ರತಿಮೆಯ ಸ್ಥಾಪನೆಯು ಕೇವಲ ಅಲಂಕಾರವಲ್ಲ. ಅತ್ಯಂತ ಭಾವನಾತ್ಮಕ ವಿಷಯವಾಗಿದ್ದು, ಅಮೆರಿಕದ ನೆನಪನ್ನು ಉಳಿಸಿಕೊಳ್ಳಲು ಇದನ್ನು ನಿರ್ಮಿಸಿದ್ದೇನೆ ಎಂದಿದ್ದಾರೆ.
'ನಾನು ಪ್ರತಿ ಬಾರಿ ಸ್ವಾತಂತ್ರ್ಯ ಪ್ರತಿಮೆಯ ಬಳಿ ಹಾದು ಹೋದಾಗ ಅದು ನನಗೆ ವಿಶೇಷ ಅನುಭವವನ್ನು ನೀಡಿದೆ. ನಾನು ಪ್ರತಿ ವರ್ಷ ಭಾರತಕ್ಕೆ ಭೇಟಿ ನೀಡುತ್ತೇನೆ, ಆದರೆ, ಆ ನೆನಪು ಯಾವಾಗಲೂ ನನ್ನೊಂದಿಗೆ ಇರುತ್ತದೆ. ಅದಕ್ಕಾಗಿಯೇ ನಾನು ಅದನ್ನು ನನ್ನ ಮನೆಯ ಮೇಲ್ಛಾವಣಿಯಲ್ಲಿ ಮರುಸೃಷ್ಟಿಸಲು ನಿರ್ಧರಿಸಿದೆ'ಎಂದು ಪ್ರತಿಕೃತಿ ಸ್ಥಾಪನೆ ಹಿಂದಿನ ಕಾರಣವನ್ನು ಮಥಾರು ಬಿಚ್ಚಿಟ್ಟಿದ್ದಾರೆ.
ಪ್ರತಿಮೆಯನ್ನು ಪೂರ್ಣಗೊಳಿಸಲು ಸುಮಾರು 20 ರಿಂದ 25 ದಿನಗಳು ಹಿಡಿದಿದ್ದು, ಸುಮಾರು ₹3 ಲಕ್ಷ ವೆಚ್ಚವಾಯಿತು ಎಂದು ಹೇಳಿದ್ದಾರೆ.
'ಇದು ನನ್ನ ನೆನಪುಗಳನ್ನು ಜೀವಂತವಾಗಿಡಲು ಒಂದು ಮಾರ್ಗವಾಗಿದೆ. ನ್ಯೂಯಾರ್ಕ್‌ನ ಜನರು ಸ್ವಾತಂತ್ರ್ಯ ಪ್ರತಿಮೆಯೊಂದಿಗೆ ಚಿತ್ರ ತೆಗೆದುಕೊಳ್ಳಲು ಇಷ್ಟಪಡುತ್ತಾರೆ. ಜಲಂಧರ್‌ನಲ್ಲಿ ಇದೇ ರೀತಿಯ ಪ್ರತಿಮೆಯನ್ನು ಏಕೆ ನಿರ್ಮಿಸಬಾರದು? ಇಲ್ಲಿನ ಜನರೂ ಸಹ ಅದರ ಬಳಿಗೆ ಬಂದು ಆನಂದಿಸಬಹುದು ಮತ್ತು ಚಿತ್ರಗಳನ್ನು ತೆಗೆದುಕೊಳ್ಳಬಹುದು ಎಂದು ನಾನು ಭಾವಿಸಿದೆ'ಎಂದು ಅವರು ಹೇಳಿದ್ದಾರೆ.
ಅಮೆರಿಕದಲ್ಲಿ ಕಟ್ಟಡ ನಿರ್ಮಾಣ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಮಥಾರು, ತಮ್ಮ ಮನೆಯ ಮೇಲ್ಛಾವಣಿಯನ್ನು ಅಮೆರಿಕ ಧ್ವಜಗಳಿಂದ ಅಲಂಕರಿಸಿದ್ದಾರೆ. ಪಂಜಾಬಿ ಗಾಯಕ ದಿವಂಗತ ಸಿಧು ಮೂಸೆವಾಲಾ ಅವರ ಅಭಿಮಾನಿ ಎಂದೂ ಹೇಳಿಕೊಂಡಿದ್ದಾರೆ. ಮೇಲ್ಛಾವಣಿಯಲ್ಲಿ ಕಲಾವಿದನ ಪೋಸ್ಟರ್‌ಗಳನ್ನು ಸಹ ಹಾಕಿದ್ದಾರೆ.
ಪಂಜಾಬ್‌ನ ದೋಬಾ ಪ್ರದೇಶದಲ್ಲಿ ಪ್ರತಿಮೆಗಳನ್ನು ಸ್ಥಾಪಿಸುವ ಈ ಪ್ರವೃತ್ತಿ ಹೊಸದೇನಲ್ಲ. ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎನ್‌ಆರ್‌ಐಗಳಿದ್ದಾರೆ. ಅವರರು ತಮ್ಮ ಜಾಗತಿಕ ಮಾನ್ಯತೆ ಮತ್ತು ವೈಯಕ್ತಿಕ ಆಸಕ್ತಿಗಳನ್ನು ಪ್ರದರ್ಶಿಸಲು ಛಾವಣಿಗಳ ಮೇಲೆ ವಿಮಾನಗಳು, ಫುಟ್ಬಾಲ್ ಆಕಾರದ ನೀರಿನ ಟ್ಯಾಂಕ್‌ಗಳು ಮತ್ತು ಟ್ರಾಕ್ಟರುಗಳಂತಹ ಸೃಜನಶೀಲ ರಚನೆಗಳನ್ನು ಸ್ಥಾಪಿಸುತ್ತಿರುತ್ತಾರೆ.

