ನವದೆಹಲಿ: 'ತೂಕ ಇಳಿಸುವ ಜಿಎಲ್‌ಪಿ-1 ಆಧಾರಿತ ಔಷಧಿಗಳು ಟೈಪ್-2 ಮಧುಮೇಹ ಮತ್ತು ಸ್ಥೂಲಕಾಯಕ್ಕೆ ಚಿಕಿತ್ಸೆಗೆ ಬಳಸುವುದಾದರೂ, ಅವುಗಳು ಗಂಭೀರ ಅಡ್ಡಪರಿಣಾಮ ಬೀರುತ್ತವೆ. ಆದ್ದರಿಂದ ವೈದ್ಯಕೀಯ ತಜ್ಞರ ಸಲಹೆ ಪಡೆದೇ ಅವುಗಳನ್ನು ತೆಗೆದುಕೊಳ್ಳಬೇಕು' ಎಂದು ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ.
ಜಿಎಲ್‌ಪಿ-1 ಔಷಧಿಗಳ ವಿವಿಧ ಆವೃತ್ತಿಗಳನ್ನು ಇತ್ತೀಚೆಗೆ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿರುವುದನ್ನು ಸರ್ಕಾರ ಆದೇಶದಲ್ಲಿ ಉಲ್ಲೇಖಿಸಿದೆ. ಇವುಗಳಿಗೆ ಔಷಧ ಅಂಗಡಿಗಳು, ಆನ್‌ಲೈನ್ ವೇದಿಕೆಗಳು, ಸಗಟು ಔಷಧ ವ್ಯಾಪಾರಿಗಳೂ ಮತ್ತು ಚಿಕಿತ್ಸಾಲಯಗಳಿಂದ ಬೇಡಿಕೆ ಬರುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ಕೇಂದ್ರೀಯ ಔಷಧಗಳ ಗುಣಮಟ್ಟ ನಿಯಂತ್ರಣ ಸಂಸ್ಥೆ(ಸಿಡಿಎಸ್‌ಸಿಒ) ಇಂಥ ಔಷಧಗಳ ಅನಧಿಕೃತ ಮಾರಾಟ ಮತ್ತು ಪ್ರಚಾರದ ವಿರುದ್ಧ ಕಣ್ಗಾವಲನ್ನು ತೀವ್ರಗೊಳಿಸಿದೆ. ಮುಂದಿನ ದಿನಗಳಲ್ಲಿ ಕಠಿಣ ತಪಾಸಣೆ ಮತ್ತು ಕಣ್ಗಾವಲನ್ನೂ ಮುಂದುವರಿಸುವುದಾಗಿ ಅದು ಎಚ್ಚರಿಸಿದೆ.
ಜಿಎಲ್‌ಪಿ-1 ಔಷಧಗಳನ್ನು ಟೈಪ್ 2 ಮಧುಮೇಹ ಮತ್ತು ಸ್ಥೂಲಕಾಯ ಎರಡರ ಚಿಕಿತ್ಸೆಗಾಗಿಯೂ ಅಭಿವೃದ್ಧಿಪಡಿಸಲಾಗಿದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣಕ್ಕೆ ತರಲು ಹಾರ್ಮೋನ್ ಅಸಮತೋಲನವನ್ನು ಸರಿಪಡಿಸುವ ಮೂಲಕ ಇನ್ಸುಲಿನ್ ಬಿಡುಗಡೆಯನ್ನು ಉತ್ತೇಜಿಸುತ್ತದೆ.

