ಕೋಲ್ಕತ್ತಾ: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ನೋಪಾರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರ್ಜುನ್ ಸಿಂಗ್ ಅವರು, ಚುನಾವಣಾ ಅಫಿಡವಿಟ್‌ನಲ್ಲಿ ತಮ್ಮ ವಿರುದ್ಧ ಬಾಕಿ ಇರುವ 119 ಕ್ರಿಮಿನಲ್ ಪ್ರಕರಣಗಳನ್ನು ಉಲ್ಲೇಖಿಸಿದ್ದಾರೆ.
ಅರ್ಜುನ್ ಸಿಂಗ್ ವಿರುದ್ಧ 2019ರಲ್ಲಿ 24 ಪ್ರಕರಣಗಳು ಮಾತ್ರ ಬಾಕಿ ಇದ್ದವು.
ಇದು 7 ವರ್ಷಗಳಲ್ಲಿ ಹಲವು ಪಟ್ಟು ಹೆಚ್ಚಿದೆ ಎನ್ನುವುದು ಗಮನಾರ್ಹ.
ಬ್ಯಾರಕ್‌ಪೋರ್‌ನ ಮಾಜಿ ಸಂಸದರೂ ಆಗಿರುವ ಸಿಂಗ್, ನಾಮಪತ್ರದ ಜತೆಗೆ ತಮ್ಮಆದಾಯ, ಆಸ್ತಿ, ಸಾಲ ಮತ್ತಿತರ ಮಾಹಿತಿ ಒಳಗೊಂಡ ಸುದೀರ್ಘ 93 ಪುಟಗಳ ಅಫಿಡವಿಟ್ ಸಲ್ಲಿಸಿದ್ದಾರೆ. ಅಫಿಡವಿಟ್ ಪ್ರಕಾರ ಅವರ ವಾರ್ಷಿಕ ಆದಾಯವು ಕಳೆದ ಐದು ವರ್ಷಗಳಲ್ಲಿ ಭಾರಿ ಏರಿಳಿತ ಕಂಡಿದೆ.
2020-21ರಲ್ಲಿ ಅವರು ₹13.41 ಲಕ್ಷ ಆದಾಯ ಘೋಷಿಸಿಕೊಂಡಿದ್ದರು. 2021-22ರಲ್ಲಿ ಇದು ₹12.26 ಲಕ್ಷಕ್ಕೆ ಕುಸಿದಿದ್ದಾಗಿ ಹೇಳಿದ್ದಾರೆ. 2023-24ರಲ್ಲಿ ₹18.87 ಲಕ್ಷ ಆದಾಯ ಉಲ್ಲೇಖಿಸಿದ್ದ ಸಿಂಗ್ 2022-25ರಲ್ಲಿ ಈ ಆದಾಯ ಮತ್ತೆ ₹13.65 ಲಕ್ಷಕ್ಕೆ ಕುಸಿದಿದ್ದಾಗಿ ಹೇಳಿದ್ದಾರೆ.
ಸದ್ಯ ₹25 ಸಾವಿರ ನಗದು, ₹5 ಲಕ್ಷ ಠೇವಣಿ, ಕಂಪನಿಯೊಂದರಲ್ಲಿ ₹24 ಲಕ್ಷ ಹೂಡಿಕೆ, ಎನ್‌ಎಸ್‌ಸಿಯಲ್ಲಿ ₹1.65 ಲಕ್ಷ ಉಳಿತಾಯ, ಟೊಯೊಟಾ ಫಾರ್ಚೂನರ್ ಕಾರು, ₹3.89 ಲಕ್ಷ ಮೌಲ್ಯದ ಚಿನ್ನಾಭರಣ, ಜಗದಲ್ ಮತ್ತು ಚಂದನಗರ್‌ನಲ್ಲಿ ₹4 ಕೋಟಿ ಮೊತ್ತದ ಸ್ಥಿರಾಸ್ತಿ ಹೊಂದಿರುವುದಾಗಿ ಈ ಬಾರಿಯ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಸಿಂಗ್ ಅವರು ಟಿಎಂಸಿ ಅಭ್ಯರ್ಥಿಯಾಗಿ 2001ರಿಂದ ಭಟ್ಪರಾ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ. 2019ರಲ್ಲಿ ಬಿಜೆಪಿ ಸೇರಿದ ಅವರು, ಬ್ಯಾರಕ್‌ಪೋರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಟಿಎಂಸಿಯ ದಿನೇಶ್ ತ್ರಿವೇದಿ ಅವರನ್ನು ಸೋಲಿಸಿದ್ದರು. 2022ರಲ್ಲಿ ಮರಳಿ ಟಿಎಂಸಿ ಸೇರಿದರು. ಆದರೆ, 2024ರ ಲೋಕಸಭಾ ಚುನಾವಣೆಯಲ್ಲಿ ಟಿಎಂಸಿ ಟಿಕೆಟ್ ನಿರಾಕರಿಸಿದ್ದರಿಂದ ಮತ್ತೆ ಬಿಜೆಪಿಗೆ ಮರಳಿದರು. ಈ ಬಾರಿ ಬಿಜೆಪಿ ಟಿಕೆಟ್ ನೀಡಿದೆ. ಸಿಂಗ್ ಅವರ ಪುತ್ರ ಪವನ್ ಸಿಂಗ್ ಕೂಡ ಭಟ್ಪರಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

