ನವದೆಹಲಿ: ದೇಶದ ಹಲವು ಪ್ರದೇಶಗಳಲ್ಲಿ ತಾಪಮಾನ ಹೆಚ್ಚುತ್ತಿರುವುದರಿಂದ, ಭಾರತ ಹವಾಮಾನ ಇಲಾಖೆ (ಐಎಂಡಿ) ಕೆಲ ಸಲಹೆ ಮತ್ತು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಮಾರ್ಗಸೂಚಿಗಳು ಹೀಗಿವೆ..
ಮಧ್ಯಾಹ್ನದ ಸಮಯದಲ್ಲಿ ಸೂರ್ಯನ ಬೆಳಕಿಗೆ ಹೆಚ್ಚು ಹೊತ್ತು ಒಡ್ಡಿಕೊಳ್ಳುವುದನ್ನು ತಪ್ಪಿಸಿ.
ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ಗಮನಹರಿಸಿ. ಸಾಕಷ್ಟು ನೀರು ಕುಡಿಯಿರಿ.
ಹಗುರವಾದ ಮತ್ತು ಸಡಿಲ ಇರುವ ಬಟ್ಟೆಗಳನ್ನು ಧರಿಸಿ.
ತಾಪಮಾನ ಹೆಚ್ಚಿರುವ ಸಮಯದಲ್ಲಿ ಕಠಿಣವಾದ ಹೊರಾಂಗಣ ಕೆಲಸಗಳನ್ನು ಮಾಡಬೇಡಿ.
ಮಕ್ಕಳು, ವೃದ್ಧರು ಮತ್ತು ಅನಾರೋಗ್ಯದ ಸಮಸ್ಯೆ ಇರುವವರ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ಐಎಂಡಿ ಸಲಹೆ ನೀಡಿದೆ
ಬಿಸಿಲಾಘಾತ ಮತ್ತು ತೀವ್ರ ಸುಸ್ತನ್ನು ತಪ್ಪಿಸಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಅತ್ಯಗತ್ಯ ಎಂದು ಹವಾಮಾನ ಇಲಾಖೆ ಹೇಳಿದೆ.
ಇತ್ತೀಚಿನ ಮಾಹಿತಿಯ ಪ್ರಕಾರ ವಾಯವ್ಯ, ಮಧ್ಯ ಭಾರತದ ಹಲವು ಭಾಗಗಳಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ನಿಂದ 44 ಡಿಗ್ರಿ ಸೆಲ್ಸಿಯಸ್ ನಡುವೆ ಇದೆ. ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ ಗರಿಷ್ಠ ತಾಪಮಾನ 44.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಐಎಂಡಿ ತಿಳಿಸಿದೆ.
ಹಲವಾರು ಪ್ರದೇಶಗಳಲ್ಲಿ, ತಾಪಮಾನ ಸಾಮಾನ್ಯಕ್ಕಿಂತ 5 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚಿದೆ. ಮುಂದಿನ ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಪಂಜಾಬ್, ಹರಿಯಾಣ, ಚಂಡೀಗಢ ಮತ್ತು ದೆಹಲಿ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಮಧ್ಯ ಭಾರತದ ಪ್ರತ್ಯೇಕ ಪ್ರದೇಶಗಳಲ್ಲಿ ಶಾಖದ ಅಲೆ ವಾತಾವರಣ ಇರುವ ಸಾಧ್ಯತೆಯಿದೆ ಎಂದೂ ಐಎಂಡಿ ಮುನ್ಸೂಚನೆ ನೀಡಿದೆ.

