ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಉಂಟಾದ ಪೂರೈಕೆ ವ್ಯತ್ಯಯವು ಗೃಹ ಬಳಕೆ ಮತ್ತು ವಾಣಿಜ್ಯ ಬಳಕೆದಾರರ ಮೇಲೆ ಪರಿಣಾಮ ಬೀರಿದ್ದು, ಮಾರ್ಚ್ ತಿಂಗಳಲ್ಲಿ ದೇಶದ ಅಡುಗೆ ಅನಿಲ (ಎಲ್‌ಪಿಜಿ) ಬಳಕೆ ಶೇ 13ರಷ್ಟು ಕುಸಿತ ಕಂಡಿದೆ ಎಂದು ಇತ್ತೀಚಿನ ಅಧಿಕೃತ ಅಂಕಿಅಂಶಗಳಿಂದ ಗೊತ್ತಾಗಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ 2.729 ಮಿಲಿಯನ್ ಟನ್ ಎಲ್‌ಪಿಜಿ ಬಳಕೆಯಾಗಿತ್ತು. ಆದರೆ ಈ ವರ್ಷದ ಮಾರ್ಚ್‌ನಲ್ಲಿ ಬಳಕೆ 2.379 ಮಿಲಿಯನ್ ಟನ್‌ಗಳಿಗೆ ತಲುಪಿದ್ದು, ಶೇ 12.8 ರಷ್ಟು ಇಳಿಕೆಯಾಗಿದೆ.
ಭಾರತ ತನ್ನ ಒಟ್ಟು ಬೇಡಿಕೆಯ ಎಲ್‌ಪಿಜಿಯ ಶೇ60 ರಷ್ಟು ಆಮದು ಮಾಡಿಕೊಳ್ಳುತ್ತದೆ. ಇದರ ಬಹುಪಾಲು ಪಾಲು ಹೊರ್ಮುಜ್ ಜಲಸಂಧಿಯ ಮೂಲಕ ಬರುತ್ತದೆ. ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಲಸಂಧಿಯಲ್ಲಿ ಹಡಗುಗಳ ಸುಗಮ ಸಂಚಾರ ನಡೆಯುತ್ತಿಲ್ಲ. ಸೌದಿ ಅರೇಬಿಯಾ, ಯುಎಇಯಿಂದ ಪೂರೈಕೆ ಸ್ಥಗಿತಗೊಂಡಿರುವುದರಿಂದ ಹೋಟೆಲ್‌ಗಳು ಮತ್ತು ಕೈಗಾರಿಕೆಗಳಂತಹ ವಾಣಿಜ್ಯ ಸಂಸ್ಥೆಗಳಿಗೆ ಎಲ್‌ಪಿಜಿ ಪೂರೈಕೆಯನ್ನು ಸರ್ಕಾರ ಕಡಿತಗೊಳಿಸಿದೆ.
ಇಂಧನ ಸಚಿವಾಲಯದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಘಟಕದ (ಪಿಪಿಎಸಿ) ಪ್ರಕಾರ, ಗೃಹ ಬಳಕೆಯ ಸಿಲಿಂಡರ್‌ಗಳ ಮಾರಾಟ ಮಾರ್ಚ್‌ನಲ್ಲಿ ಶೇ 8.1 ರಷ್ಟು ಕುಸಿದು 2.219 ಮಿಲಿಯನ್ ಟನ್‌ಗಳಿಗೆ ತಲುಪಿದೆ. ವಾಣಿಜ್ಯ ಸಿಲಿಂಡರ್ ಮಾರಾಟ ಶೇ 48 ರಷ್ಟು ಕುಸಿದಿದೆ. ಸಗಟು ಎಲ್‌ಪಿಜಿ ಮಾರಾಟ ಶೇ 75.5 ರಷ್ಟು ಕುಸಿತ ಕಂಡಿದೆ.
ಎಲ್‌ಪಿಜಿ ಪೂರೈಕೆ ಸಹಜವಾಗಿದೆ, ಗೃಹ ಬಳಕೆಯ ಎಲ್‌ಪಿಜಿಗೆ ತೊಂದರೆಯಾಗುತ್ತಿಲ್ಲ ಎನ್ನುವ ಸರ್ಕಾರದ ಪ್ರತಿಪಾದನೆಗಳಿಗೆ ವ್ಯತಿರಿಕ್ತವಾಗಿ ಪಿಪಿಎಸಿ ದತ್ತಾಂಶ ಇದೆ.

