ಭುವನೇಶ್ವರ: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಒಡಿಶಾದಲ್ಲಿ ನೂತನ ಸೆಮಿಕಂಡಕ್ಟರ್ ಘಟಕಕ್ಕೆ ಶಂಕುಸ್ಥಾಪನೆ ನೇರವೇರಿಸಿದರು.
ಇದೊಂದು ಐತಿಹಾಸಿಕ ದಿನ ಎಂದು ಬಣ್ಣಿಸಿದ ಅವರು, ದೇಶದಲ್ಲೇ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಮುಂದುವರಿದ ಐಟಿ ಹಬ್ ಆಗಿ ಒಡಿಶಾ ಹೊರಹೊಮ್ಮುತ್ತಿದೆ ಎಂದು ಎಎನ್‌ಐ ಸುದ್ದಿ ಸಂಸ್ಥೆಗೆ ತಿಳಿಸಿದರು.
ಕೈಗಾರಿಕೆ ಬೆಳವಣಿಗೆಯಲ್ಲಿ ಒಡಿಶಾ ವೇಗವಾಗಿ ಬೆಳೆಯುತ್ತಿದ್ದು ಇಲ್ಲಿ ವಿಶ್ವದರ್ಜೆಯ ಅತ್ಯಾಧುನಿಕ ತಂತ್ರಜ್ಞಾನ ಉದ್ಯಮ ಸ್ಥಾಪನೆಯಾಗುತ್ತಿರುವುದು ಬಹಳ ಮುಖ್ಯ ಎಂದರು.
ಲೋಹ ಮತ್ತು ಖನಿಜಗಳ ಆಧಾರಿತ ಉದ್ಯಮಗಳಿಂದ ಈಗ ಅನೇಕ ಹೊಸ ಕೈಗಾರಿಕೆಗಳ ನೆಲೆಯಾಗಿ ರಾಜ್ಯವು ಪರಿವರ್ತನೆಯಾಗುತ್ತಿದೆ. ಒಡಿಶಾ ಈಗ ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕೇಂದ್ರವಾಗುತ್ತಿದೆ ಎಂದರು.
ರಾಜ್ಯದಲ್ಲಿನ ಸೆಮಿಕಂಡಕ್ಟರ್ ಘಟಕ ನಮ್ಮ ಪರಿಸರ ವ್ಯವಸ್ಥೆಗೆ ದೊಡ್ಡ ಶಕ್ತಿಯನ್ನು ನೀಡಲಿದೆ ಎಂದು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿಶಾಲ್ ದೇವ್ ಬಣ್ಣಿಸಿದರು. 3ಡಿಜಿಎಸ್ ಕಂಪನಿ ಜಗತ್ತಿನಲ್ಲೇ ಮುಂಚೂಣಿಯಲ್ಲಿರುವ ಸಂಸ್ಥೆಯಾಗಿದೆ. ದೊಡ್ಡ ದೊಡ್ಡ ಜಾಗತಿಕ ಕಂಪನಿಗಳು ಇದರಲ್ಲಿ ಹೂಡಿಕೆ ಮಾಡಿವೆ. ಮುಂದಿನ ದಿನಗಳಲ್ಲಿ ಒಡಿಶಾದಲ್ಲಿ ಸೆಮಿಕಂಡಕ್ಟರ್ ವಲಯಕ್ಕೆ ಹೆಚ್ಚಿನ ಹೂಡಿಕೆ ಹರಿದು ಬರಲಿದೆ ಎಂದರು.
ಭುವನೇಶ್ವರದ ಇನ್ಫೋ ವ್ಯಾಲಿಯಲ್ಲಿ ಭಾರತದ ಮೊದಲ ವಾಣಿಜ್ಯ ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ಘಟಕ ಸ್ಥಾಪನೆಯಾಗಲಿದೆ. ಇಲ್ಲಿ ತಯಾರಾದ ಉತ್ಪನ್ನಗಳನ್ನು ರಫ್ತು ಮಾಡಲು ಉದ್ದೇಶಿಸಲಾಗಿದೆ.
ಸೆಮಿಕಂಡಕ್ಟರ್ ಸಾಧನಗಳನ್ನು ರಕ್ಷಣೆ, ಎಲೆಕ್ಟ್ರಿಕ್ ವಾಹನಗಳು, ರೈಲ್ವೆ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿ ಬಳಸಲಾಗುತ್ತದೆ.

