ವಿರುಧುನಗರ: ಇಲ್ಲಿಗೆ ಸಮೀಪದ ಕಟ್ಟನಾರಪಟ್ಟಿ ಪ್ರದೇಶದ ಪಟಾಕಿ ತಯಾರಿಕಾ ಘಟಕವೊಂದರಲ್ಲಿ ಭಾನುವಾರ ಸಂಭವಿಸಿದ ಭಾರಿ ಸ್ಫೋಟದಲ್ಲಿ 18ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ.
'ಸ್ಫೋಟ ನಡೆದಾಗ ಘಟಕದಲ್ಲಿ 100ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು.
ಸಿದ್ಧಪಡಿಸಲಾಗಿದ್ದ ಪಟಾಕಿಗಳಿಗೆ ಕೆಲವರು ವರಾಂಡದಲ್ಲಿ ಕುಳಿತು ಅಂತಿಮ ಸ್ಪರ್ಶ ನೀಡುವಾಗ ಅವಘಡ ಸಂಭವಿಸಿದೆ.
ಸ್ಫೋಟದ ತೀವ್ರತೆಗೆ ಮೂರು ಕೊಠಡಿಗಳು ಸಂಪೂರ್ಣ ನೆಲಕಚ್ಚಿವೆ. ಇಟ್ಟಿಗೆಗಳು ಸಿಡಿದು ಇಡೀ ಆವರಣದ ತುಂಬ ಚಲ್ಲಾಪಿಲ್ಲಿಯಾಗಿ ಬಿದ್ದಿವೆ. ಹಲವು ಕೊಠಡಿಗಳ ಗೋಡೆಗಳು ಬಿರುಕು ಬಿಟ್ಟಿವೆ. ದಟ್ಟ ಹೊಗೆ ಮತ್ತು ಬೆಂಕಿ ಬಾನೆತ್ತರ ಎದ್ದಿರುವ ದೃಶ್ಯ ಕಂಡುಬಂತು' ಎಂದು ಅಗ್ನಿಶಾಮಕ ದಳದ ಮೂಲಗಳು ತಿಳಿಸಿವೆ.
'ಇದುವರೆಗೆ 18 ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಆದರೆ, ಹೆಚ್ಚಿನ ದೇಹಗಳು ಗುರುತಿಸಲಾಗದಷ್ಟು ಛಿದ್ರಗೊಂಡಿವೆ. ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು ವಿರುಧುನಗರ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಫತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಇವರಲ್ಲಿ ಮೂವರು ಮಹಿಳೆಯರು ಸೇರಿದ್ದು, ಅವರಿಗೆ ಶೇಕಡ 60ರಷ್ಟು ಸುಟ್ಟ ಗಾಯಗಳಾಗಿವೆ' ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಟ್ಟನಾರಪಟ್ಟಿಯ ಮುತ್ತುಮಾಣಿಕ್ಯಂ ಎಂಬವರಿಗೆ ಸೇರಿದ 'ವನಜಾ' ಹೆಸರಿನ ಪಟಾಕಿ ತಯಾರಿಕೆ ಘಟಕದಲ್ಲಿ ಸ್ಫೋಟ ಸಂಭವಿಸಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಅನೇಕ ಮಂದಿ ಕಟ್ಟಡಗಳ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಬಹುದು ಎಂದು ಪೊಲೀಸ್, ಅಗ್ನಿಶಾಮಕ ಇಲಾಖೆಯ ಮೂಲಗಳು ತಿಳಿಸಿವೆ.
ಪಟಾಕಿ ತಯಾರಿಕಾ ಘಟಕವು ನಾಗ್ಪುರದ ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆಯಿಂದ (ಪಿಇಎಸ್‌ಒ) ಪರವಾನಗಿ ಪಡೆದುಕೊಂಡಿರುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಸ್ಫೋಟದ ಬಳಿಕ ದಟ್ಟ ಹೊಗೆ ಎದ್ದಿದ್ದ ದೃಶ್ಯ - ಪಿಟಿಐ ಚಿತ್ರ
ಹಲವು ಗಂಟೆಗಳ ಕಾರ್ಯಾಚರಣೆ
ಘಟನೆ ನಡೆದ ಕೆಲ ಹೊತ್ತಿನಲ್ಲೇ ಅಗ್ನಿಶಾಮಕ ದಳದ ಸಿಬ್ಬಂದಿ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಆದರೆ ಬೆಂಕಿಯ ಜ್ವಾಲೆ ಇಡೀ ಕಟ್ಟಡವನ್ನು ಆವರಿಸಿದ್ದರಿಂದ ಆರಂಭಿಕ ಸ್ಫೋಟದ ನಂತರ ಮತ್ತೆ ಮತ್ತೆ ಪಟಾಕಿಗಳು ಸಿಡಿಯುತ್ತಲೇ ಇದ್ದಿದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಯಿತು. ಬೆಂಕಿ ನಂದಿಸಲು ಹಲವು ಗಂಟೆಗಳೇ ಬೇಕಾಯಿತು ಎಂದು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಅವಶೇಷಗಳ ಅಡಿಯಲ್ಲಿ ಇನ್ನಷ್ಟು ಕಾರ್ಮಿಕರು ಸಿಲುಕಿರುವ ಸಂಶಯವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ಎರಡನೇ ದುರಂತ; ಕ್ರಮಕ್ಕೆ ಸಿಎಂ ಸೂಚನೆ
ವಿರುಧುನಗರ ಜಿಲ್ಲೆಯ ವೆಂಬಕೊಟ್ಟೈ ಪ್ರದೇಶದ ಪಟಾಕಿ ತಯಾರಿಕಾ ಘಟಕವೊಂದರಲ್ಲಿ ಇತ್ತೀಚೆಗೆ ಸ್ಫೋಟ ಸಂಭವಿಸಿ ನಾಲ್ವರು ಮೃತಪಟ್ಟಿದ್ದರು. ಈಗ ಮತ್ತೊಂದು ದುರಂತ ಇದೇ ಜಿಲ್ಲೆಯಲ್ಲಿ ನಡೆದಿದೆ. 'ಸಚಿವ ಕೆ.ಕೆ.ಎಸ್.ಆರ್. ರಾಮಚಂದ್ರನ್ ಮತ್ತು ತಂಗಂ ತೆನ್ನರಸು ಅವರಿಗೆ ತಕ್ಷಣವೇ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತಗೊಳಿಸಲು ಮತ್ತು ಮೇಲ್ವಿಚಾರಣೆ ನಡೆಸಲು ಸೂಚಿಸಿದ್ದೇನೆ. ವಿರುಧುನಗರ ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿ ತುರ್ತು ಕ್ರಮ ವಹಿಸಲು ನಿರ್ದೇಶಿಸಲಾಗಿದೆ. ಮೃತಪಟ್ಟವರ ಕುಟುಂಬದ ಜತೆಗೆ ತಮಿಳುನಾಡು ಸರ್ಕಾರ ಇದೆ' ಎಂದು ಮುಖ್ಯಮಂತ್ರಿ ಸ್ಟಾಲಿನ್ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

