ನವದೆಹಲಿ: ಜಾರಿ ನಿರ್ದೇಶನಾಲಯದ (ಇ.ಡಿ) ಒತ್ತಡದಿಂದಾಗಿ ರಾಜಕೀಯ ಸಲಹಾ ಸಂಸ್ಥೆ ಐ- ಪ್ಯಾಕ್, ಪಶ್ಚಿಮ ಬಂಗಾಳದಲ್ಲಿ ತನ್ನ ಕೆಲಸ ಸ್ಥಗಿತಗೊಳಿಸಿದೆ ಎಂಬುದು ಗೊತ್ತಾಗಿದೆ.
ವಿಧಾನಸಭಾ ಚುನಾವಣೆಯ ಮತದಾನಕ್ಕೆ (ಏ. 23, 29) ಬೆರಳೆಣಿಕೆ ದಿನ ಬಾಕಿ ಉಳಿದಿರುವಾಗ ಐ- ಪ್ಯಾಕ್ ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ದೊಡ್ಡ ಪೆಟ್ಟು ಬಿದ್ದಂತಾಗಿದೆ.
ಪಶ್ಚಿಮ ಬಂಗಾಳದಲ್ಲಿ ಕೆಲಸ ಮಾಡುತ್ತಿರುವ ತನ್ನ ಸಿಬ್ಬಂದಿಗೆ 20 ದಿನ ಕಡ್ಡಾಯ ರಜೆಯನ್ನು ಪಡೆಯುವಂತೆ ಐ- ಪ್ಯಾಕ್‌ನ ಮಾನವ ಸಂಪನ್ಮೂಲ ವಿಭಾಗವು ತಿಳಿಸಿದ್ದು, ಮೇ 11ರ ನಂತರ ಪರಿಸ್ಥಿತಿಯನ್ನು ಪರಿಶೀಲಿಸುವುದಾಗಿ ಹೇಳಿದೆ ಎಂಬುದು ಮೂಲಗಳಿಂದ 'ಪ್ರಜಾವಾಣಿ'ಗೆ ಖಚಿತಪಟ್ಟಿದೆ.
ಬಂಗಾಳದ ಚುನಾವಣಾ ಅಖಾಡವು ಜಿದ್ದಾಜಿದ್ದಿಯಿಂದ ಕೂಡಿದೆ. ಅಧಿಕಾರದ ಚುಕ್ಕಾಣಿ ಹಿಡಿಯಲಿಕ್ಕಾಗಿ ಬಿಜೆಪಿ ಹಾಗೂ ಟಿಎಂಸಿ ನಡುವೆ ನೇರ ಹಣಾಹಣಿ ನಡೆದಿದೆ. ಭಾರತೀಯ ರಾಜಕೀಯ ಕ್ರಿಯಾ ಸಮಿತಿಯು (ಐ- ಪಿಎಸಿ, ಐ- ಪ್ಯಾಕ್) ಹಲವು ವರ್ಷಗಳಿಂದಲೂ ಮಮತಾ ಬ್ಯಾನರ್ಜಿ ಅವರಿಗೆ ರಾಜಕೀಯ ಸಲಹೆಗಳನ್ನು ನೀಡುತ್ತಿದೆ.
ವಿಧಾನಸಭಾ ಚುನಾವಣೆಗೂ ಮುನ್ನವೇ ಐ- ಪ್ಯಾಕ್‌ಗೆ ಸಂಬಂಧಿಸಿದ ಕೆಲ ಸ್ಥಳಗಳಲ್ಲಿ ಇ.ಡಿ ಶೋಧ ಕೈಗೊಂಡಿತ್ತು.
ಪಶ್ಚಿಮ ಬಂಗಾಳದಲ್ಲಿ ಕಲ್ಲಿದ್ದಲು ಕಳ್ಳಸಾಗಣೆ ಹಾಗೂ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ತಿಂಗಳ ಆರಂಭದಲ್ಲಿ ಕೇಂದ್ರ ತನಿಖಾ ಸಂಸ್ಥೆಯು ಬೆಂಗಳೂರು, ಹೈದರಾಬಾದ್ ಮತ್ತು ದೆಹಲಿಯಲ್ಲಿ ಶೋಧ ನಡೆಸಿತ್ತು.
ಐ- ಪ್ಯಾಕ್ ಸಹ ಸಂಸ್ಥಾಪಕ, ನಿರ್ದೇಶಕ ರಿಷಿ ರಾಜ್ ಸಿಂಗ್ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲೂ ಶೋಧ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐ- ಪ್ಯಾಕ್ ನಿರ್ದೇಶಕ ಹಾಗೂ ಸಹ ಸಂಸ್ಥಾಪಕ ವಿನೇಶ್ ಚಂದೇಲ್ ಅವರನ್ನು ಈಚೆಗೆ ಬಂಧಿಸಲಾಗಿತ್ತು.
ಐ-ಪ್ಯಾಕ್ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಕೋಲ್ಕತ್ತ ನಿವಾಸದಲ್ಲಿ ಕಳೆದ ಜನವರಿಯಲ್ಲಿ ಇ.ಡಿ ಶೋಧ ನಡೆಸಿತ್ತು. ಕಾರ್ಯಾಚರಣೆ ನಡೆಯುತ್ತಿದ್ದಾಗಲೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಥಳಕ್ಕೆ ತೆರಳಿ ಕೆಲವು ಕಡತಗಳು ಹಾಗೂ ಲ್ಯಾಪ್‌ಟಾಪ್ ಕೊಂಡೊಯ್ದಿದ್ದರು.

